ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ- ಟಿ.ಡಿ. ರಾಜೇಗೌಡ
KannadaprabhaNewsNetwork | Published : Oct 31 2023, 01:16 AM IST
ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ- ಟಿ.ಡಿ. ರಾಜೇಗೌಡ
ಸಾರಾಂಶ
ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ- ಟಿ.ಡಿ. ರಾಜೇಗೌಡ
- ಒಕ್ಕಲಿಗರ ಮಹಿಳಾ ಸಂಘದಿಂದ ಏರ್ಪಡಿಸಿದ್ದ ಸೂಪರ್ ಮಾಮ್, ರಸ ಪ್ರಶ್ನೆ ಸ್ಪರ್ಧೆ, ಫ್ಯಾಷನ್ ಶೋ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮಹಿಳೆಯರು ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಒಕ್ಕಲಿಗರ ಮಹಿಳಾ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸೂಪರ್ ಮಾಮ್ ಹಾಗೂ ರಸ ಪ್ರಶ್ನೆ ಸ್ಪರ್ಧೆ, ಫ್ಯಾಷನ್ ಶೋವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಉನ್ನತ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಆಧುನಿಕ ಯುಗದಲ್ಲಿ ಮಹಿಳೆಯರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬರಲು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಒತ್ತಡದಿಂದ ಹೊರ ಬರಬಹುದು ಎಂದು ಹೇಳಿದರು. ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವ ಮೂಲಕ ಶಿಕ್ಷಣವಂತರು ಹಾಗೂ ಸ್ವಾವಲಂಬಿಗಳಾಗಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಮಹಿಳೆಯರು ಮತ್ತು ಪುರುಷರು ಸಮಾನರೆಂಬ ಭಾವನೆ ಮೂಡುತ್ತಿದ್ದು. ಮಹಿಳೆಯರು ಕ್ರೀಡೆ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ತಮ್ಮ ಸಾಮರ್ಥ್ಯ ತೋರ್ಪಡಿಸುತ್ತಿದ್ದಾರೆ ಎಂದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಮಹಿಳಾ ಸಂಘ ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಮಹಿಳೆಯರಿಗೆ ಅಗತ್ಯವಿರುವ ಸಲಹೆ ಸಹಕಾರ ನೀಡುತ್ತ ಉತ್ತಮ ಸಂಘಟನೆ ಮಾಡಿದ್ದಾರೆ. ಸಮಾಜದ ಸಂಘಟನೆ ತುಂಬಾ ಮುಖ್ಯ. ನಮ್ಮ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಒಳ್ಳೆ ಹೆಸರು ಗಳಿಸಿದೆ. ಉತ್ತಮ ಸದಸ್ಯರ ತಂಡವಿದೆ ಎಂದು ಹೇಳಿದರು. ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ನಮ್ಮ ಸಂಘ ಪ್ರತಿ ತಿಂಗಳು ವಿವಿಧ ರೀತಿಯ ಮಹಿಳೆಯರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ಮಹಿಳಾ ದಿನಾಚಾರಣೆಯಂದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹ ನೀಡಿ, ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಬಾರಿ ಎಲ್ಲರ ಸಲಹೆ ಪಡೆದು, ಸೂಪರ್ ಮಾಮ್ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಫ್ಯಾಷನ್ ಷೋ ಮಾಡಲಾಗಿದೆ ಎಂದರು. ಈ ಸಂರ್ದದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೆಗೌಡ, ಮಾಜಿ ಸಚಿವೆ ಮೊಟಮ್ಮ, ಬೆಂಗಳೂರಿನ ತೀರ್ಪುಗಾರರಾದ ನೀರಜ್ ನಟರಾಜ್, ಮಿಸ್ ಇಂಡಿಯಾ 2018ರ ಶ್ವೇತಾ ನಿರಂಜನ್, ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಸೆಕ್ಷನ್ ಅಧಿಕಾರಿ ಶ್ವೇತಾ ಗೌಡ, ಕಿರುತೆರೆ ನಟಿ ಶರ್ಮಿತಾ ಗೌಡ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ, ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾ ಸುರೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 30 ಕೆಸಿಕೆಎಂ 3 ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸೂಪರ್ ಮಾಮ್, ರಸ ಪ್ರಶ್ನೆ ಸ್ಪರ್ಧೆ ಮತ್ತು ಫ್ಯಾಷನ್ ಶೋ ವನ್ನು ಶಾಸಕ ಟಿ.ಡಿ. ರಾಜೇಗೌಡ ಉದ್ಘಾಟಿಸಿದರು. ಮೋಟಮ್ಮ, ಗಾಯತ್ರಿ ಶಾಂತೇಗೌಡ, ಸವಿತಾ ರಮೇಶ್, ಟಿ. ರಾಜಶೇಖರ್ ಇದ್ದರು.