ಸಾರಾಂಶ
ರಾಣಿಬೆನ್ನೂರು: ಮಹಿಳೆಯರು ಭಾರತೀಯ ಸಂಸ್ಕೃತಿಯ ಪ್ರತೀಕರಾಗಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ನಗರದ ಹುಣಿಸಿಕಟ್ಟಿ ರಸ್ತೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಐಕ್ಯುಎಸಿ ಹಾಗೂ ಸಾಂಸ್ಕೃತಿಕ ವಿಭಾಗಗಳ ಸಹಯೋಗದಲ್ಲಿ ಜಾನಪದ ಉತ್ಸವ- 2025ನ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆ ಉಳಿಸುವ ಬೆಳೆಸುವ ಅನೇಕ ಮಹನೀಯರು ನಮ್ಮ ತಾಲೂಕಿನಲ್ಲಿ ಇದ್ದಾರೆ. ಇಡೀ ಜಗತ್ತಿನಲ್ಲಿಯೇ ಜಾನಪದ ವಿಶ್ವವಿದ್ಯಾಲಯ ಹಾವೇರಿ ಜಿಲ್ಲೆಯಲ್ಲಿದ್ದು, ಅದನ್ನು ಬೆಳೆಸುವ ಕಾರ್ಯ ನಮ್ಮದಾಗಿದೆ. ಯುವಪೀಳಿಗೆಯೇ ಮೇಲೆ ಜನಪದ ಕಲೆಯನ್ನು ಉಳಿಸುವ ಹೊಣೆಗಾರಿಕೆ ಇದೆ. ವಿದ್ಯಾರ್ಥಿಗಳು ಹೆಚ್ಚಾಗಿ ಜಾನಪದ ಸಾಹಿತ್ಯ ಹಾಗೂ ಕಲೆ ಬಗ್ಗೆ ಅಧ್ಯಯನ ಮಾಡಬೇಕು. ತಂತ್ರಜ್ಞಾನ ಯುಗದಲ್ಲಿ ಕೂಡ ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಇಂದಿನ ಪರಂಪರೆ ಡಿಜೆ ಸಂಸ್ಕೃತಿಗೆ ಕರೆದುಕೊಂಡು ಹೋಗುವುದು ವಿಷಾದಕರ ಸಂಗತಿ. ಗಣೇಶ ಹಾಗೂ ಇನ್ನಿತರ ಹಬ್ಬಗಳಲ್ಲಿ ಈ ನೆಲದ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದರು.ಜಾನಪದ ವಿದ್ವಾಂಸ ಡಾ. ಕೆ.ಸಿ. ನಾಗರಜ್ಜಿ ಮಾತನಾಡಿ, ಜನನಿಯಿಂದ ಜಾನಪದ ಕಲೆ ಪ್ರಾರಂಭವಾಯಿತು. ಬಾಲ್ಯದಿಂದಲೇ ತಾಯಿ ಮಗುವಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುತ್ತಾಳೆ. ಜಾನಪದ ಮೂಢನಂಬಿಕೆಯಲ್ಲ, ಅದಕ್ಕೆ ವೈಜ್ಞಾನಿಕ ಅರ್ಥವಿದೆ. ಸರ್ಕಾರ ಜಾನಪದ ಉತ್ಸವ ಕಾರ್ಯಕ್ರಮ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಕಲೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.ಪ್ರಾ. ರವಿಕುಮಾರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಶೇಖರ ಚಕ್ಕಿ, ಡಾ. ಎಲ್.ಎಂ. ಪೂಜಾರ, ಜಾನಪದ ಗಾಯಕ ತಿಪ್ಪೇಶ ಲೆಕ್ಕಿಕೋಣೆ, ಡಾ. ವೆಂಕಟೇಶ, ಸುಜಾತಾ ಕಟ್ಟಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ಕಾಟೇನಹಳ್ಳಿ ಗ್ರಾಮದ ವೃದ್ಧ ಕಾಣೆಹಾವೇರಿ: ಕಾಟೇನಹಳ್ಳಿ ಗ್ರಾಮದ ಮಾಲತೇಶ ಕಲ್ಲಪ್ಪ ಕಮ್ಮಾರ(೭೭) ಎಂಬಾತ ಮಾ. ೫ರಂದು ಮನೆಯಿಂದ ಹೋದವರು ಕಾಣೆಯಾಗಿರುವುದಾಗಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾಣೆಯಾದ ವ್ಯಕ್ತಿ ೫.೫ ಅಡಿ ಎತ್ತರ, ದುಂಡುಮುಖ, ಗೋದಿಗೆಂಪು ಮೈಬಣ್ಣ, ತೆಳ್ಳನೆ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಲುಂಗಿ, ಪಂಚೆ, ಟವೆಲ್ ಧರಿಸಿದ್ದು, ಕನ್ನಡ ಮಾತನಾಡುತ್ತಾರೆ. ಈ ವ್ಯಕ್ತಿಯ ಮಾಹಿತಿ ಲಭ್ಯವಾದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ೦೮೩೭೫-೧೦೦, ಸಿಪಿಐ ಗ್ರಾಮೀಣ ವೃತ್ತ ಕಚೇರಿ ದೂ. ೦೮೩೭೫- ೨೩೨೪೯೩ ಹಾಗೂ ಪಿಎಸ್‌ಐ ಗ್ರಾಮೀಣ ಪೊಲೀಸ್ ಠಾಣೆ ದೂ. ೦೮೩೭೫- ೨೩೩೩೩೩ ಸಂಪರ್ಕಿಸಬಹುದೆಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.