ಪ್ರಧಾನಿ ಮೋದಿರವರ ಅಭಿವೃದ್ಧಿ ಚಿಂತನೆ ದೇಶದ ಜನರ ಗಮನ ಸೆಳೆದಿದೆ. ಹೀಗಾಗಿಯೇ ಬಿಜೆಪಿ ಗೆಲುವು ಸಾಧಿಸುತ್ತಿದೆ. 2014ರಲ್ಲಿ ಕಾಂಗ್ರೆಸ್ ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು.
ಕನ್ನಡಪ್ರಭ ವಾರ್ತೆ ರಾಮನಗರ
ಮಹಿಳಾ ಮೀಸಲಾತಿ ಮಸೂದೆ ತಿರಸ್ಕಾರ ಮಾಡಿದ ಪರಿಣಾಮ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್ ಗೆ ಗುನ್ನಾ, ಗೂಸಾ ಕೊಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿರವರ ಅಭಿವೃದ್ಧಿ ಚಿಂತನೆ ದೇಶದ ಜನರ ಗಮನ ಸೆಳೆದಿದೆ. ಹೀಗಾಗಿಯೇ ಬಿಜೆಪಿ ಗೆಲುವು ಸಾಧಿಸುತ್ತಿದೆ. 2014ರಲ್ಲಿ ಕಾಂಗ್ರೆಸ್ ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ ಎಷ್ಟು ರಾಜ್ಯಗಳಲ್ಲಿದೆ. ಈಗ ನಿಮ್ಮ ಇಂಡಿಯಾ ಒಕ್ಕೂಟ ಏನಾಯಿತು ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಗೆಲುವು ಚುನಾವಣಾ ಆಯೋಗದ ಗೆಲುವು ಎಂಬ ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ವಿ.ಸೋಮಣ್ಣ, ಪ್ರಿಯಾಂಕಾ ಖರ್ಗೆ ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ಮಾತನಾಡುತ್ತಾರೆ. ಕೇರಳದಲ್ಲಿ ಗೆದ್ದು ಬೀಗುತ್ತಿದ್ದಾರಲ್ಲ ಅಲ್ಲಿ ಸರಿ ಇದಿಯಾ. ನೀವು ಗೆದ್ದಾಗ ಮಾತ್ರ ಸರಿ, ಇಲ್ಲ ಅಂದರೆ ನಮ್ಮ ಗೂಬೆ ಕೂರಿಸುತ್ತಾರೆ. ನಿಮಗೆಲ್ಲ ಮನುಷ್ಯತ್ವ ಇಲ್ವಾ. ಅಂಬೇಡ್ಕರ್ ನಿಮಗೇನಾದರು ಬೇರೆ ಸಂವಿಧಾನ ಬರೆದುಕೊಟ್ಟಿದ್ದಾರಾ. ಕಾನೂನು ಎಲ್ಲರಿಗೂ ಒಂದೇ. ಯಾರೂ ಕಾನೂನು ಮೀರುವ ಕೆಲಸ ಮಾಡಲ್ಲ. ಪ್ರಿಯಾಂಕಾ ಖರ್ಗೆ ಜಾಣಕುರುಡರ ಹಾಗೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು.ಶೃಂಗೇರಿ ಕ್ಷೇತ್ರದಲ್ಲಿ ವೋಟ್ ಡಕಾಯಿತಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ಆದೇಶದಂತೆ ಮರುಎಣಿಕೆ ಆಗಿದೆ. ಈಗ ಅವರದ್ದು ಏನೂ ಉಳಿದಿಲ್ಲ ಅಂತ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುವ ಸಣ್ಣತನ ಬಿಡಬೇಕು ಎಂದರು.
ಸಿದ್ದರಾಮಯ್ಯರವರು ಎರಡು ಮುಖ್ಯಮಂತ್ರಿಯಾಗಿದ್ದರು ಬುದ್ಧಿ ಕಲಿತಿಲ್ಲ. ವೋಟ್ ಚೋರಿ ಕಾಂಗ್ರೆಸ್‌ನ ಚಾಳಿಯೇ ಹೊರತು ಬಿಜೆಪಿಯದಲ್ಲ. ನಾವು ಆ ಕೆಲಸ ಮಾಡಲ್ಲ. ನಮಗೆ ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಅಂತ ಕಾಂಗ್ರೆಸ್ ನವರು ಹೇಳುತ್ತಿದ್ದರು. ಹಾಗಾದರೆ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಗೆಲ್ಲಲು ಇವಿಎಂ ಬೇಕಾಯಿತಾ ಎಂದು ಪ್ರಶ್ನಿಸಿದರು.ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಸುಳ್ಳು ಹೇಳಿ ಅಭ್ಯಾಸ. ಸುಳ್ಳು ಹೇಳುವುದರಲ್ಲಿ ಅವರಿಗೆ ಡಾಕ್ಟರೇಟ್ ಕೊಡಬೇಕು. ತಮ್ಮ ಪಾಪದ ಕೆಲಸ ಮುಚ್ಚಿಕೊಳ್ಳಲು ಬಿಜೆಪಿ ಕಡೆ ಕೈ ತೋರಿಸುತ್ತಿದ್ದಾರೆ.ರಾಜ್ಯ ಸರ್ಕಾರ ತೀಟೆ ಮಾತುಗಳನ್ನಾಡುವುದನ್ನು ಬಿಟ್ಟು ಜನರ ಪರವಾಗಿ ಕೆಲಸ ಮಾಡಲಿ ಎಂದು ವಿ.ಸೋಮಣ್ಣ ಸಲಹೆ ನೀಡಿದರು.
-------5ಕೆಆರ್ ಎಂಎನ್ 4.ಜೆಪಿಜಿ
ವಿ.ಸೋಮಣ್ಣ