ಸಾರಾಂಶ
ಬ್ಯಾಡಗಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು ಹೇಳಿದರು. ಮೋಟೆಬೆನ್ನೂರಿನ ಮೈಲಾರ ಮಹಾದೇವ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಾರಿಶಕ್ತಿ ವಂದನಾ ಅಭಿಯಾನದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಅವರಲ್ಲಿರುವ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಭಾರತದಲ್ಲಿನ ಪ್ರಮುಖ ಉದ್ಯಮಗಳಿಗೆ ಮಹಿಳೆಯರೇ ಆಧಾರಸ್ತಂಭವಾಗಿದ್ದಲ್ಲದೇ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಕೌಟುಂಬಿಕ ಹೀಗೆ ಜೀವನದ ಪ್ರತಿಯೊಂದು ಸವಾಲನ್ನು ಎದುರಿಸುತ್ತಿದ್ದಾರೆ. ಹೀಗಿದ್ದರೂ ತಮ್ಮ ಬದುಕಿನಲ್ಲಿ ಅವಕಾಶಗಳಿಗಾಗಿ ಅವರೆಲ್ಲರೂ ಅಲೆದಾಡಬೇಕಾಗಿದ್ದು, ವಿಶ್ವಾದ್ಯಂತ ಮಹಿಳಾ ಸಮಾನತೆಗಾಗಿ ಪ್ರತಿಪಾದಿಸಿದವರನ್ನು ಸ್ಮರಿಸುವಂತಹ ಕೆಲಸವಾಗಬೇಕಾಗಿದೆ ಎಂದರು.ದೌರ್ಜನ್ಯಗಳಿಗೆ ಕಡಿವಾಣ ಬೀಳಲಿ: ಕುಟುಂಬದ ಒಳಗೂ ಹೊರಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳೆಯಲ್ಲಿರುವ ಪುನಶ್ಚೇತನ ಶಕ್ತಿಯನ್ನು ಸದ್ಭಳಕೆಯಾಗುತ್ತಿಲ್ಲ. ಸರ್ಕಾರಗಳು ಎಷ್ಟೇ ನೀತಿ-ನಿಯಮ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಪ್ರಯೋಜನವಾಗುತ್ತಿಲ್ಲ. ಪುರುಷನ ಅಂತ್ಯ ಕಾಲದವರೆಗೂ ಜತೆಗಿದ್ದು ತಾಯಿಯಾಗಿ, ಮಡದಿಯಾಗಿ, ಮಗಳಾಗಿ ವಿವಿಧ ಹಂತಗಳಲ್ಲಿ ಸಹಾಯಹಸ್ತ ಚಾಚುತ್ತಿರುವ ಅವರ ಮನೋಭಾವಕ್ಕೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಿನಯ ಹಿರೇಮಠ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ, ಪುರಸಭೆ ಸದಸ್ಯರಾದ ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಕವಿತಾ ಸೊಪ್ಪಿನಮಠ, ಗಾಯತ್ರಿ ರಾಯ್ಕರ್, ಬಿಜೆಪಿ ಮುಖಂಡರಾದ ವಿಜಯ ಭಾರತ್ ಬಳ್ಳಾರಿ, ವಿಷ್ಣುಕಾಂತ್ ಬೆನ್ನೂರು, ಸುರೇಶ ಉದ್ಯೋಗಣ್ಣನವರ, ಮಂಜುನಾಥ್ ಜಾಧವ, ಕಾವ್ಯಾ ಮರಡಿ, ಗುತ್ತೆಮ್ಮ ಮಾಳಗಿ ಉಪಸ್ಥಿತರಿದ್ದರು.