ಕನ್ನಡಪ್ರಭ ವಾರ್ತೆ ಹುಕ್ಕೇರಿ ಕೃಷಿ ಎಂದರೆ ಬೆಳೆಗಳನ್ನು ಬೆಳೆಯುವುದು, ಜಾನುವಾರುಗಳನ್ನು ಸಾಕುವುದನ್ನು ಒಳಗೊಂಡಿರುವ ಪ್ರಮುಖ ಚಟುವಟಿಕೆ. ಇದು ಆಹಾರ ಉತ್ಪಾದನೆಯ ಮೂಲಾಧಾರವೂ ಹೌದು. ಇದು ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಕ್ಷೇತ್ರಕ್ಕೆ ಶಕ್ತಿ ತುಂಬುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸನ್ನಪಾಪಮ್ಮ.ಕೆ.ಜೆ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಕೃಷಿ ಎಂದರೆ ಬೆಳೆಗಳನ್ನು ಬೆಳೆಯುವುದು, ಜಾನುವಾರುಗಳನ್ನು ಸಾಕುವುದನ್ನು ಒಳಗೊಂಡಿರುವ ಪ್ರಮುಖ ಚಟುವಟಿಕೆ. ಇದು ಆಹಾರ ಉತ್ಪಾದನೆಯ ಮೂಲಾಧಾರವೂ ಹೌದು. ಇದು ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಕ್ಷೇತ್ರಕ್ಕೆ ಶಕ್ತಿ ತುಂಬುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸನ್ನಪಾಪಮ್ಮ.ಕೆ.ಜೆ ಅಭಿಪ್ರಾಯಪಟ್ಟರು.ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ರಾಷ್ಟ್ರೀಯ ಮಹಿಳಾ ರೈತ ದಿನಾಚರಣೆ ಅಂಗವಾಗಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿತ್ತನೆಯಿಂದ ಕೊಯ್ಲಿನವರೆಗೆ, ಪಶುಸಂಗೋಪನೆಯಿಂದ ಆಹಾರ ಸಂಸ್ಕರಣೆಯವರೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಡಾ.ಸುರೇಖಾ ಸಂಕನಗೌಡರ ಮಾತನಾಡಿ, ಮಹಿಳಾ ರೈತರ ಅಮೂಲ್ಯ ಕೊಡುಗೆಯನ್ನು ಗುರುತಿಸಲು, ಗೌರವಿಸಲು ಹಾಗೂ ಅವರ ಸಬಲೀಕರಣದ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಮಹಿಳಾ ರೈತ ದಿನಾಚರಣೆ ಆಚರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ತಂತ್ರಜ್ಞಾನವು ಅಭಿವೃದ್ಧಿ ಹೊಂದಿದ್ದು, ಇದು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.ಸಹ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ದೇಸಾಯಿ ಮಾತನಾಡಿ, ಸಾವಯವ ಕೃಷಿ, ಸಮಗ್ರ ಕೃಷಿ ಮತ್ತು ಸಾಂಪ್ರದಾಯಿಕ ಕೃಷಿ ಬಗ್ಗೆ ಅರಿವು ಹೊಂದಬೇಕು. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಕೃಷಿ ಭೂಮಿಯ ನಿರ್ವಹಣೆ, ನೀರಿನ ಬಳಕೆ, ಮತ್ತು ರಸಗೊಬ್ಬರಗಳ ಬಳಕೆಯ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ಗ್ರಾಪಂ ಪಿಡಿಒ ಅಶೋಕ್ ಕಂಠಿ, ಹಿರಿಯ ವಿಜ್ಞಾನಿ ಡಾ.ರವಿ.ವೈ, ಎನ್ಆರ್ಎಲ್ಎಂ ಯೋಜನೆ ವಲಯ ಮೇಲ್ವಿಚಾರಕ ಭೀಮಶಿ ಗೋರಖನಾಥ ಮತ್ತಿತರರು ಉಪಸ್ಥಿತರಿದ್ದರು. ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ (ಕೃಷಿ ನಿರತ ಮಹಿಳೆ) ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕೃಷಿಗೆ ಸಂಬಂಧಿಸಿದ ಮಣ್ಣಿನ ಆರೋಗ್ಯ, ಪರಿಸರ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆ, ಕೃಷಿ ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆ, ಕೃಷಿ ಮಹಿಳೆಯರ ಶ್ರಮ ಕಡಿಮೆಗೊಳಿಸುವ ಉಪಕರಣಗಳು ಹಾಗೂ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಉತ್ಪಾದನೆ ವಿಷಯಗಳ ಕುರಿತು ಉಪನ್ಯಾಸ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ರೈತ ಮಹಿಳೆಯರು ಪಾಲ್ಗೊಂಡು ಮಾಹಿತಿ ಪಡೆದರು.