ಸಾರಾಂಶ
ರಾಮನಗರ: ಪೌರಾಣಿಕ ನಾಟಕಗಳಲ್ಲಿ ಮಹಿಳಾ ಕಲಾವಿದರು ಪುರುಷ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸುತ್ತಾರೆ. ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಗೌರಮ್ಮ ಹೇಳಿದರು.
ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮನಗರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪೌರಾಣಿಕ ನಾಟಕದಲ್ಲಿ ಅಭಿನಯಿಸಿದ ಭಾರತ್ ವಿಕಾಸ ಪರಿಷದ್ ಕಣ್ವ ಶಾಖೆಯ ಮಹಿಳಾ ತಂಡದ ರಂಗ ಕಲಾವಿದರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಮಹಿಳೆಯರು ಹಿಂದಿನಿಂದಲೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಾಣಿಕ ನಾಟಕಗಳಲ್ಲಿ, ಸಾಮಾಜಿಕ ನಾಟಕಗಳಲ್ಲಿ, ರಂಗಭೂಮಿಯಲ್ಲೂ ಸಹ ಉತ್ತಮವಾಗಿ ನಟಿಸಿ ಹೆಸರುಗಳಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆಯರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕ್ಷೇತ್ರಗಳೂ ಪುರುಷರಿಗಷ್ಟೇ ಸೀಮಿತವಲ್ಲ, ಮಹಿಳೆಯರೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡಬೇಕು ಎಂದರು.ಸಾಹಿತಿ ಎಸ್. ಸುಮಂಗಲ ಸಿದ್ದರಾಜು ಮಾತನಾಡಿ, ಮಹಿಳೆಯರು ನಾಟಕಗಳಲ್ಲಿ ಅಭಿನಯಿಸುವ ಜೊತೆಗೆ ನಾಟಕಗಳನ್ನು ರಚಿಸಿದ್ದಾರೆ, ನಿರ್ದೇಶಿಸಿದ್ದಾರೆ. ಮಹಿಳೆಯರು ರಚಿಸಿರುವ ಸಾಮಾಜಿಕ ನಾಟಕಗಳ ಸಂಖ್ಯೆಯೇ ಹೆಚ್ಚಾಗಿದೆ. ಸ್ತ್ರೀಶೋಷಣೆ, ಸಾಮಾಜಿಕ ಅಸಮಾನತೆ, ವರದಕ್ಷಿಣೆಯ ಪಿಡುಗು, ಹೆಣ್ಣು ಭ್ರೂಣಹತ್ಯೆ, ಪಾತಿವ್ರತ್ಯದ ಸಮಸ್ಯೆ, ಅವಲಂಬಿತ ಜೀವನ, ನಿರುದ್ಯೋಗ ಸಮಸ್ಯೆ ಹೀಗೆ ಇಂತಹ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ಮಹಿಳೆಯರು ಅನೇಕ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯದ ನಾಟಕ ಕ್ಷೇತ್ರಕ್ಕೆ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿಯೂ ಮಹಿಳೆಯರು ಸಾಮಾಜಿಕ ನಾಟಕ ಸೇರಿದಂತೆ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.ಶಾಂತಲಾ ಚಾರಿಬಟಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ ನಮ್ಮ ಹಿರಿಯರು ಪೌರಾಣಿಕ ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದರು ಜೊತೆಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು ಎಂದು ತಿಳಿಸಿದರು.
ನಮ್ಮ ನಾಡಿನ ಚಾರಿತ್ರಿಕ ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ಪೌರಾಣಿಕ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಪೌರಾಣಿಕ ನಾಟಕಗಳಲ್ಲಿಯೂ ಒಂದೊಂದು ರೀತಿಯ ಮೌಲ್ಯಗಳು ಅಡಕವಾಗಿರುತ್ತವೆ ಎಂದರು.ಪಾತ್ರಗಳಿಗೆ ಜೀವತುಂಬುವ ಕಲೆಗಾರಿಕೆಗಾಗಿ ಐದಾರು ತಿಂಗಳುಗಳ ಕಾಲ ಅಭ್ಯಾಸ ಮಾಡಲಾಗಿರುತ್ತದೆ. ಪೌರಾಣಿಕ ನಾಟಕಗಳಲ್ಲಿ ಬರುವ ಒಂದೊಂದು ಪಾತ್ರಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ. ಮಹಿಳೆಯರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ರೈತಪರ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, ಮಹಿಳೆಯರೇ ಅಭಿನಯಿಸಿರುವ ಪೌರಾಣಿಕ ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳಬೇಕು. ಇದರಿಂದ ಹಲವು ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಪ್ರೇರಣೆ ಸಿಗುತ್ತದೆ. ಆದರೆ ಇಂದಿಗೂ ಮಹಿಳೆಯರಿಗೆ ಕೆಲವು ಕ್ಷೇತ್ರಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ತಿಳಿಸಿದರು.ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾಶಿವಣ್ಣ, ರಂಗ ನಿರ್ದೇಶಕ ಚಿರಂಜೀವಿ ಆರ್. ಲೋಕೇಶ್ವರ್, ಭಾರತ ವಿಕಾಸ ಪರಿಷದ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ವಸಂತ್ ಕುಮಾರ್, ತಾಲ್ಲೂಕು ಅಧ್ಯಕ್ಷ ಪಿ. ಗುರುಮಾದಪ್ಪ ಉಪಸ್ಥಿತರಿದ್ದರು.
19ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಭಾರತ್ ವಿಕಾಸ ಪರಿಷದ್ ಕಣ್ವ ಶಾಖೆಯ ಮಹಿಳಾ ತಂಡದ ರಂಗ ಕಲಾವಿದರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಹಿರಿಯ ಕಲಾವಿದೆ ಗೌರಮ್ಮ ಉದ್ಘಾಟಿಸಿದರು.