ಸಾರಾಂಶ
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಗೈಯುತ್ತ ತನ್ನನ್ನು ತಾನು ಗುರುತಿಸಿಕೊಂಡು ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಗೈಯುತ್ತ ತನ್ನನ್ನು ತಾನು ಗುರುತಿಸಿಕೊಂಡು ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವ್ಯಾಪ್ತಿಯ ಗಡಿಗ್ರಾಮ ಜೆ.ಸಿ. ಪುರ ವಲಯದಲ್ಲಿ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಗಳ ಮೂಲಕ ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದು, ಯಾರಿಗೇನೂ ಕಡಿಮೆ ಇಲ್ಲವೆಂಬಂತೆ ಮಾದರಿ ಮಹಿಳೆಯಾಗಿ ಸಮಾಜದಲ್ಲಿ ಹೊರಹೊಮ್ಮಿದ್ದಾಳೆ. ಮಹಿಳೆಯನ್ನು ಮತ್ತಷ್ಟು ಸಮಾಜಮುಖಿಯನ್ನಾಗಿಸಬೇಕೆಂಬ ಉದ್ದೇಶದಿಂದ ಸ್ತ್ರೀಶಕ್ತಿಯೇ ಈ ದೇಶದ ಸಂಪತ್ತು ಎಂದು ಮನಗಂಡ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ಪ್ರತಿ ಹಳ್ಳಿಗಳಲ್ಲೂ ತಮ್ಮ ಯೋಜನೆಯನ್ನು ವಿಸ್ತಾರ ಮಾಡಿ ಅಲ್ಲಿನ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯೊಂದಿಗೆ ಸ್ವ ಉದ್ಯೋಗಗಳ ತರಬೇತಿ, ಹೈನುಗಾರಿಕೆ, ಶಿಕ್ಷಣ, ಆರೋಗ್ಯ, ಕಾನೂನು ಅರಿವು, ಆರ್ಥಿಕ ನೆರವು ಹೀಗೆ ಹಲವು ಯೋಜನೆಗಳನ್ನು ತಂದು ಪ್ರತಿ ಮಹಿಳೆಯನ್ನು ಸ್ವಾವಲಂಬಿಯನ್ನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ದೊಡ್ಡಮೇಟಿಕುರ್ಕೆ ಬೂದಿಹಾಳ್ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಸಾಮಾನ್ಯ ಜನರು ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಕಷ್ಟಕರವಾಗಿದ್ದು, ಆದರೆ ಧರ್ಮಸ್ಥಳ ಯೋಜನೆಯಿಂದ ಸುಲಭವಾಗಿ ಹಣ ಪಡೆದು ಸ್ವ ಉದ್ಯೋಗ ಕಂಡುಕೊಂಡು ಉತ್ತಮ ಜೀವನ ನಿರ್ವಹಣೆ ಮಾಡಬಹುದಾಗಿದೆ. ಧರ್ಮಸ್ಥಳ ಸರ್ವ ಧರ್ಮಗಳನ್ನೊಳಗೊಂಡ ಕ್ಷೇತ್ರವಾಗಿದ್ದು ಜಾರಿಯಾಗಿರುವ ಯೋಜನೆಗಳ ಫವನ್ನು ಅರ್ಹರು ಪಡೆದುಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಹಾಗೆಯೇ ಪೋಷಕರು ಮಕ್ಕಳಿಗೆ ಮೊಬೈಲ್ ಕಡಿವಾಣ ಹಾಕಿ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದರು.ತಾಲೂಕು ಯೋಜನಾಧಿಕಾರಿ ಕೆ. ಉದಯ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೀಲಾ ಧರ್ಮಶೇಖರ್, ಗ್ರಾ.ಪಂ ಅಧ್ಯಕ್ಷ ಜೆ.ಎಂ. ಗಿರೀಶ್, ತಾ.ಪಂ. ಮಾಜಿ ಸದಸ್ಯ ಸಿ.ಸಿ. ಮಹೇಶ್ವರಪ್ಪ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ವಲಯ ಅಧ್ಯಕ್ಷೆ ಸುಲ್ತಾನ್ ಬಾನು, ಗೀತಾ, ಮೇಲ್ವಿಚಾರಕಿ ರಮ್ಯಾ, ವಿ.ಎಲ್‌ಇಎಸ್ ಸಹಾಯ ಪ್ರಗತಿ ಬಂಉ ಸದಸ್ಯರು, ನವಜೀವನ ಸಮಿತಿ ಸದಸ್ಯರು ಭಾಗವಹಿಸಿದ್ದರು. ನಂತರ ವಲಯ ಮಟ್ಟದಲ್ಲಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದವರಿಗೆ ಹಾಗೂ ಉತ್ತಮ ವ್ಯವಹಾರ, ವಾರದ ಸಭೆ, ಶಿಸ್ತು, ಹಣ ಸಂಗ್ರಹಣೆ ಯೋಜನೆಯ ಎಲ್ಲಾ ವಿಷಯದಲ್ಲಿ ಭಾಗಿಯಾದವರಿಗೆ ಬಹುಮಾನ ವಿತರಿಸಲಾಯಿತು.