ಸಾಮೂಹಿಕ ಶೌಚಾಲಯ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದ ಮಹಿಳೆಯರು ಸೋಮವಾರ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕನಕಗಿರಿ: ಸಾಮೂಹಿಕ ಶೌಚಾಲಯ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ತಾಲೂಕಿನ ಹಿರೇಖೇಡ ಗ್ರಾಮದ ಮಹಿಳೆಯರು ಸೋಮವಾರ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗ್ರಾಮದ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ಗ್ರಾಮದಲ್ಲಿ 80 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳಿಲ್ಲ. ಬೆಳಗಿನ ಜಾವ ಮತ್ತು ಸಂಜೆ ಕತ್ತಲಾದ ವೇಳೆಯಲ್ಲಿ ಮಹಿಳೆಯರು ಬಯಲಿಗೆ ಹೋಗಿ ಶೌಚ ಮಾಡುವುದು ಅನಿವಾರ್ಯವಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುತ್ತೇವೆ ಎಂದರೂ ಪಂಚಾಯಿತಿಯವರು ಹಣ ನೀಡುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮದ ಮಹಿಳೆಯರ ಮಾನ ಉಳಿಸಬೇಕು. ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮದ ಸರ್ಕಾರಿ ಭೂಮಿಯಲ್ಲಿ ನಾವು ಬಹಿರ್ದೆಸೆಗೆ ಹೋಗುತ್ತಿದ್ದೆವು. ಈಗ ಕೆಲವರು ಭೂಮಿ ನಮ್ಮದೆಂದು ಗಿಡಗಂಟಿಗಳನ್ನು ಕಿತ್ತೆಸೆದಿದ್ದರಿಂದ ಹೆಣ್ಣುಮಕ್ಕಳ ಶೌಚಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಮಹಿಳೆಯರು ಮನವಿ ಮಾಡಿದರು.

ಈ ಕುರಿತು ಗ್ರಾಮ ಆಡಳಿತಾಧಿಕಾರಿ ಶಿವರಾಜ ಭೋವಿ ಮಾತನಾಡಿ, ಹಿರೇಖೇಡ ಗ್ರಾಮದ ಮಹಿಳೆಯರು ಶೌಚಕ್ಕಾಗಿ ಉಪಯೋಗಿಸುತ್ತಿದ್ದ ಭೂಮಿಯನ್ನು 1993ರಲ್ಲಿಯೇ ಗ್ರಾಮದ ಫಲಾನುಭವಿ ಕುಟುಂಬಕ್ಕೆ ನೀಡಲಾಗಿದೆ. ಭೂಮಿ ವಾರಸುದಾರರು ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ. ಮಹಿಳೆಯರ ಸಾಮೂಹಿಕ ಶೌಚಾಲಯ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಪ್ರತಿಭಟನಾಕಾರರಿಗೆ ಮೇಲಾಧಿಕಾರಿಗಳನ್ನು ಭೇಟಿಯಾಗಲು ತಿಳಿಸಿದ್ದೇನೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಶಿವರಾಜ ಭೋವಿ, ತಾಲೂಕು ಭೂಮಾಪಕ ರಮೇಶ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

ಗ್ರಾಮದ ಮಹಿಳೆಯರಾದ ಶಿಲ್ಪಾ, ಹುಲಿಗೆಮ್ಮ, ರೇಣುಕಮ್ಮ, ಹಂಬಮ್ಮ, ಶರಣಮ್ಮ, ಸತ್ಯಮ್ಮ ಇದ್ದರು.