ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಮಹಿಳೆಯರಿಗೆ ಗೌರವಸ್ಥಾನವಿದ್ದು, ಸ್ತ್ರೀ ಧರ್ಮ ಪಾಲನೆ ಮಾಡಿದರೆ ಮಹಿಳೆಯು ಇಡೀ ಜಗತ್ತನ್ನು ಗೆಲ್ಲಬಹುದು ಎಂದು ಹತ್ತರಗಿ ಹರಿಮಂದಿರದ ಡಾ. ಆನಂದ ಮಹಾರಾಜ ಗೋಸಾವಿ ಹೇಳಿದರು.ಶನಿವಾರ ಹಿಡಕಲ್ ಡ್ಯಾಂನ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವುಗಳ ಆಶ್ರಯದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ, ಗ್ರಾಪಂ ಸದಸ್ಯರಿಗೆ ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದ ನಾಗರಿಕರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಪ್ರಗತಿ ಸಾಧಿಸಲು ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ. ಕುಟುಂಬದಲ್ಲಿ ಮಹಿಳೆ ಸ್ಥಿರವಾಗಿದ್ದರೆ ಆ ಕುಟುಂಬದಲ್ಲಿ ನೆಮ್ಮದಿ, ಸುಖ ಶಾಂತಿಯಿಂದ ಇರಲು ಸಾಧ್ಯ. ಕುಟುಂಬದ ಸುಖಕ್ಕಾಗಿ ದುಡಿಯುವ ಮಹಿಳೆಯ ತ್ಯಾಗ, ಬಲಿದಾನ ಮೆಚ್ಚುವಂತದ್ದು. ಇಂತಹ ಕರುಣಾಮಯಿ ವಾತ್ಸಲ್ಯದ ಮೂರ್ತಿಯಾಗಿರುವ ಮಹಿಳೆಯರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯರಗಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆ ಪಾಚಾರ್ಯ ಕಿರಣ ಚೌಗಲಾ ಮಾತನಾಡಿ, ಮಹಿಳೆ ಸುಶಿಕ್ಷಿತೆಯಾದರೆ ಕುಟುಂಬ ಸುಧಾರಿಸಬಲ್ಲಳು. ಪರಿಸರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವೈಯಕ್ತಿಕ ಸ್ವಚ್ಛತೆ ಮತ್ತು ನೈರ್ಮಲ್ಯ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದ ಅವರು, ಮಹಿಳಾ ಕಲ್ಯಾಣ ಸಂಸ್ಥೆ ಮಹಿಳೆಯರಿಗಾಗಿ ಆಯೋಜಿಸುತ್ತಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು.ಕರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದುರದುಂಡಿ ಪಾಟೀಲ ಹಾಗೂ ಬಸ್ಸಾಪೂರ ಪಿ.ಕೆ.ಪಿ.ಎಸ್. ಅಧ್ಯಕ್ಷ ಸಿದ್ದಲಿಂಗ ಸಿದ್ದೇಗೌಡರ ಅವರನ್ನು ಕರ್ನಾಟಕ ಪತ್ರಕರ್ತರ ಸಂಘದ ಪರವಾಗಿ ಸತ್ಕರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸುರೇಖಾ ಪಾಟೀಲ, ಎಂ.ಎಂ ಗಡಗಲಿ, ಬಸವರಾಜ ಮಣ್ಣಿಕೇರಿ, ಕರಗುಪ್ಪಿ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ ಬಡಿಗೇರ, ದೀಪನ ನಾಡಗೌಡ, ಸಿದ್ದಪ್ಪ ಹಿತ್ತಲಮನಿ ಕಸಗಳ ವಿಲೇವಾರಿ, ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ನೀಡಿದರು. ಯಾದಗೂಡ, ಬೆಳವಿ, ಶಿಂಧಿಹಟ್ಟಿ, ಹುಟ್ಟಿ ಆಲೂರು, ಲೇಬರ್ ಕ್ಯಾಂಪ್ ಹಿಡಕಲ್ ಡ್ಯಾಂ ಗ್ರಾಮಗಳ ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.