ಕೌಶಲ್ಯ ತರಬೇತಿ ಪಡೆದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ-ನಂದಾ ಪಲ್ಲೇದ

| Published : Mar 24 2025, 12:33 AM IST

ಕೌಶಲ್ಯ ತರಬೇತಿ ಪಡೆದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ-ನಂದಾ ಪಲ್ಲೇದ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಕೌಶಲ್ಯ ತರಬೇತಿ ಶಿಬಿರಗಳಲ್ಲಿ ಹೆಚ್ಚಾಗಿ ತೊಡಗಿಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು. ಸರ್ಕಾರದ ಯೋಜನೆಗಳ ಜತೆಗೆ ಸಂಘ-ಸಂಸ್ಥೆಗಳು ನೀಡುವ ತರಬೇತಿ ಶಿಬಿರದಲ್ಲಿ ಮಹಿಳೆಯರು ಸಕ್ರೀಯವಾಗಿ ಭಾಗವಹಿಸಿ ಉತ್ತಮ ತರಬೇತಿ ಪಡೆದು ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗಬೇಕು ಎಂದು ತಾಲೂಕು ಬಿಜೆಪಿ ಮಹಿಳಾ ಮಂಡಳದ ಅಧ್ಯಕ್ಷೆ ನಂದಾ ಪ್ರಕಾಶ ಪಲ್ಲೇದ ಮಹಿಳೆಯರಿಗೆ ಸಲಹೆ ನೀಡಿದರು.

ಶಿರಹಟ್ಟಿ: ಮಹಿಳೆಯರು ಕೌಶಲ್ಯ ತರಬೇತಿ ಶಿಬಿರಗಳಲ್ಲಿ ಹೆಚ್ಚಾಗಿ ತೊಡಗಿಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು. ಸರ್ಕಾರದ ಯೋಜನೆಗಳ ಜತೆಗೆ ಸಂಘ-ಸಂಸ್ಥೆಗಳು ನೀಡುವ ತರಬೇತಿ ಶಿಬಿರದಲ್ಲಿ ಮಹಿಳೆಯರು ಸಕ್ರೀಯವಾಗಿ ಭಾಗವಹಿಸಿ ಉತ್ತಮ ತರಬೇತಿ ಪಡೆದು ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗಬೇಕು ಎಂದು ತಾಲೂಕು ಬಿಜೆಪಿ ಮಹಿಳಾ ಮಂಡಳದ ಅಧ್ಯಕ್ಷೆ ನಂದಾ ಪ್ರಕಾಶ ಪಲ್ಲೇದ ಮಹಿಳೆಯರಿಗೆ ಸಲಹೆ ನೀಡಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ವಿಶ್ವ ಕಂಪ್ಯೂಟರ್ ಅಕಾಡೆಮಿಯಲ್ಲಿ ಉಚಿತ ಮೇಕಪ್ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಮಹಿಳೆಯರು ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬಂತೆ ಸಮರ್ಥವಾಗಿ ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಮಹಿಳೆಯರ ಆರ್ಥಿಕ ಭದ್ರತೆ, ಸ್ವಾವಲಂಬಿ ಬದುಕು, ಸಬಲೀಕರಣಕ್ಕಾಗಿ ಸುಮಾರು ವರ್ಷಗಳಿಂದ ವಿಶ್ವ ಕಂಪ್ಯೂಟರ್ ತರಬೇತಿ ಸಂಸ್ಥೆ ಪಟ್ಟಣದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅನೇಕ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗಿದೆ ಎಂದರು. ನಿರುದ್ಯೋಗಿ ಮಹಿಳೆಯರು ತಾವು ಪಡೆದ ಸ್ವ-ಉದ್ಯೋಗದ ತರಬೇತಿಯನ್ನು ವೃತ್ತಿಗೆ ಪೂರಕವಾಗಿ ಬಳಸಿಕೊಂಡಾಗ ತರಬೇತಿ ಪಡೆದದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಇತ್ತೀಚಿನ ವರ್ಷಗಳಲ್ಲಿ ಮಾತ್ರ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಕುಳಿತು ಏನು ಮಾಡೋಣವೆಂದು ಇಂತಹ ತರಬೇತಿ ಪಡೆದುಕೊಳ್ಳುತ್ತಿದ್ದು, ಇದನ್ನು ಬದುಕಿನ ಉನ್ನತಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಬುಡನಶ್ಯಾ ಮಕಾನದಾರ ಮಾತನಾಡಿ, ಮಹಿಳೆಯರು ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಯಾವುದೇ ಉದ್ಯಮ ಆರಂಭಿಸಿದರೂ ಯಶಸ್ಸು ಸಾಧಿಸಲು ಸಾಧ್ಯ. ನೀವು ಪಡೆದ ಯಾವುದೇ ತರಬೇತಿ ಪರಿಪೂರ್ಣವಾಗಬೇಕಾದರೆ ಮುಂದಿನ ಬದುಕಿಗೆ ಆದಾಯ ತರುವ ಮಾರ್ಗವಾಗಿ ಆ ತರಬೇತಿಯನ್ನು ರೂಪಿಸಿಕೊಳ್ಳಬೇಕು ಎಂದರು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಮಹಿಳಾ ಕೌಶಲ್ಯ ತರಬೇತಿ ಕೇಂದ್ರಗಳ ಅವಶ್ಯವಿದೆ. ಹಿಂದೆ ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದಳು. ದುಡಿಯುವ ಸಮಾನತೆ ಇರಲಿಲ್ಲ. ಅಡುಗೆ ಮನೆಗೆ ಸೀಮಿತಳಾಗಿದ್ದಳು. ಆದರೆ, ಕಾಲ ಬದಲಾದಂತೆ ಮಹಿಳೆ ಪುರುಷರಷ್ಟೇ ಸರಿ ಸಮನಾಗಿ ದುಡಿಯುವ ಮೂಲಕ ಸ್ವಾವಲಂಬಿ ಬದುಕಿನತ್ತ ಮುಖ ಮಾಡಿರುವುದು ಸಂತಸದ ವಿಚಾರ ಎಂದರು.ಸತತ ಪರಿಶ್ರಮದ ಮೂಲಕ ಕೌಶಲ್ಯ ಹೊಂದಿದ ಮಹಿಳೆ ಆರ್ಥಿಕ ಸ್ವಾವಲಂಬನೆ ಪಡೆಯುವ ಮೂಲಕ ಸಾಮಾಜಿಕ, ಆರ್ಥಿಕ ಸುಧಾರಣೆಗೆ ಕೈಜೋಡಿಸಬಹುದು. ಮನೆ ಕೆಲಸದ ಒತ್ತಡದ ನಡುವೆಯೂ ಸ್ವ- ಉದ್ಯೋಗ ತರಬೇತಿ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ ಕುಟುಂಬಕ್ಕೆ ಆಧಾರವಾಗಬೆಕು ಎಂದರು. ವಿಶ್ವ ಕಂಪ್ಯೂಟರ್ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಮೇಕಪ ಆರ್ಟಿಸ್ಟ್ ಸಮಿನಾ ಲಕ್ಷ್ಮೇಶ್ವರ ತರಬೇತಿ ನೀಡಿದರು. ಸಮಾಜ ಸೇವಕಿ ಮುಬಿನಾ ಢಾಲಾಯತ, ರಾಯಲ್ ಬ್ಯೂಟಿ ಪಾರ್ಲರ್ ಸಂಚಾಲಕಿ ದಿವ್ಯ, ರಕ್ಷಾ ಬ್ಯೂಟಿ ಪಾರ್ಲರ್ ಸಂಚಾಲಕಿ ರಂಜೀತಾ, ಕೌಸರ್ ಬೇಗಂ ಕಮಡೊಳ್ಳಿ, ವೀಣಾ ಅರಳಿ, ಪವಿತ್ರ ಮೊರಬದ ಮುಂತಾದವರು ಉಪಸ್ಥಿತರಿದ್ದರು. ಸಫೀನಾ ಅತ್ತಿಗೇರಿ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಪಡೆದ ನೂರಾರು ಜನ ಮಹಿಳೆಯರು ಪಾಲ್ಗೊಂಡಿದ್ದರು.