ನಮ್ಮಲ್ಲಿರುವ ಕೌಶಲ್ಯವನ್ನು ವೃದ್ಧಿಸಿಕೊಂಡು ಮುನ್ನಡೆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಅತ್ಯುತ್ತಮ ಉದ್ಯಮಿಯಾಗಿ ಯಶಸ್ಸು ಪಡೆಯಲು ಸಾಧ್ಯವಿದ್ದು, ಇದಕ್ಕಾಗಿ ಸರ್ಕಾರದ ಸೌಲಭ್ಯ, ತಜ್ಞರ ಮಾರ್ಗದರ್ಶನ ಅತ್ಯಂತ ಮುಖ್ಯ.

ಹಾನಗಲ್ಲ: ನಮ್ಮಲ್ಲಿರುವ ಕೌಶಲ್ಯವನ್ನು ವೃದ್ಧಿಸಿಕೊಂಡು ಮುನ್ನಡೆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಅತ್ಯುತ್ತಮ ಉದ್ಯಮಿಯಾಗಿ ಯಶಸ್ಸು ಪಡೆಯಲು ಸಾಧ್ಯವಿದ್ದು, ಇದಕ್ಕಾಗಿ ಸರ್ಕಾರದ ಸೌಲಭ್ಯ, ತಜ್ಞರ ಮಾರ್ಗದರ್ಶನ ಅತ್ಯಂತ ಮುಖ್ಯ ಎಂದು ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ತಿಳಿಸಿದರು.

ಹಾನಗಲ್ಲಿನಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಇಲಾಖೆ ಜಂಟಿಯಾಗಿ ಆಯೋಜಿಸಿದ, ಪರಿಶಿಷ್ಟ ಜಾತಿಯ ಆಸಕ್ತ ಮಹಿಳೆಯರಿಗೆ ೧೦ ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ದುಡಿವವನಿಗೆ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಇದು ಕಾಲ ಹರಣ ಮಾಡುವ ಕಾಲವಲ್ಲ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಹೊಸ ಉದ್ಯೋಗಗಳನ್ನು ಹುಡುಕಿ ಅದಕ್ಕೆ ನಮ್ಮ ಪರಿಶ್ರಮ ಜೋಡಿಸಿದರೆ ಮಾತ್ರ ಉತ್ತಮ ದುಡಿಮೆ, ಆರ್ಥಿಕ ಅನುಕೂಲ ಪಡೆಯಲು ಸಾಧ್ಯ. ನಮ್ಮ ಉದ್ಯೋಗ ನಮಗಾಗಿ ಮಾತ್ರವಲ್ಲ. ಇದು ದೇಶದ ಅಭಿವೃದ್ಧಿಗೂ ಸಹಕಾರಿ. ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಕಠಿಣವಾದ ಉದ್ಯಮವನ್ನೂ ಸುಲಭವಾಗಿ ನಡೆಸಬಲ್ಲರು. ಅವರಿಗೆ ಒಳ್ಳೆಯ ಅವಕಾಶ ಕಲ್ಪಿಸಿಕೊಡುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕೆಲ್ಲ ತರಬೇತಿ ಸಹಕಾರಿ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಧಾರವಾಡದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ ಮಾತನಾಡಿ, ಸರ್ಕಾರ ಕಾಲ ಕಾಲಕ್ಕೆ ಎಲ್ಲ ವರ್ಗದ ಸಮುದಾಯಕ್ಕೆ ಕೌಶಲ್ಯ ಅಭಿವೃದ್ಧಿ ಹಾಗೂ ಆರ್ಥಿಕ ನೆರವಿಗೆ ಯೋಜನೆ ರೂಪಿಸಿ ಕಾರ್ಯಗತ ಮಾಡುತ್ತದೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕಾಭಿವೃದ್ಧಿಗೆ ಮುಂದಾಗುವುದು ಈ ಸಮಾಜದ ಜವಾಬ್ದಾರಿಯಾಗಿದ. ಇದಕ್ಕಾಗಿಯೇ ನೀಡುವ ತರಬೇತಿಗಳನ್ನು ಚೆನ್ನಾಗಿ ಪಡೆದು ಉದ್ಯಮ ಆರಂಭಿಸಿದ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು. ನಮ್ಮ ಕೌಶಲ್ಯದ ಸರಿಯಾದ ಪ್ರಯೋಜನವಾಗಬೇಕು ಎಂದರು,

ಆರ್ಥಿಕ ಸಮಾಲೋಚಕ ಪರಶುರಾಮ ಕಟ್ಟಿ, ಧಾರವಾಡದ ಸಿಡಾಕ್ ನಿವೃತ್ತ ನಿರ್ದೇಶಕ ಬಿ.ಎಸ್. ರೇವಣಕರ, ಚೈತ್ರಾ ಕುಂಬಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಎಸ್‌ಟಿ ಪ್ರಾಮುಖ್ಯತೆ, ಉದ್ಯಮಕ್ಕಾಗಿ ಬಂಡವಾಳ ಹೂಡಿಕೆ, ಮಾರುಕಟ್ಟೆ ಹಾಗೂ ಸಮುದಾಯ, ವಿವಿಧ ಉತ್ಪನ್ನಗಳ ಸಿದ್ಧತೆ, ಹಣಕಾಸಿನ ನೆರವು ಸೇರಿದಂತೆ ತರಬೇತಿ ನೀಡಲಾಗುತ್ತಿದೆ.

ಕೆ.ಎಫ್. ನಾಯ್ಕರ ಸ್ವಾಗತಿಸಿದರು. ವಿನಾಯಕ ಜಿ.ಕೆ. ನಿರೂಪಿಸಿದರು. ಶಿವಕುಮಾರ ಮಾಂಗ್ಲೇನವರ ವಂದಿಸಿದರು.