೨೮ರಂದು ಮಡಿಕೇರಿ ದಸರಾದಲ್ಲಿ ಮಹಿಳೆಯರ ಸಂಭ್ರಮ

| Published : Sep 27 2025, 12:02 AM IST

೨೮ರಂದು ಮಡಿಕೇರಿ ದಸರಾದಲ್ಲಿ ಮಹಿಳೆಯರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಮಂಜಿನ ನಗರಿ ಮಡಿಕೇರಿಯಲ್ಲಿ ಸೆ.೨೮ರಂದು ೮ನೇ ವರ್ಷದ ಮಹಿಳಾ ದಸರಾ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಮಂಜಿನ ನಗರಿ ಮಡಿಕೇರಿಯಲ್ಲಿ ಸೆ.೨೮ರಂದು ೮ನೇ ವರ್ಷದ ಮಹಿಳಾ ದಸರಾ ಏರ್ಪಡಿಸಲಾಗಿದೆ.

ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಬೆಳಗ್ಗೆ ೯.೩೦ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟನೆ ಮಾಡಲಿದ್ದಾರೆ. ನಗರಸಭೆ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಹಿಳೆಯರ ಸ್ಪರ್ಧೆಯನ್ನು ಅಪರ ಜಿಲ್ಲಾಧಿಕಾರಿ ಆರ್‌. ಐಶ್ವರ್ಯ ಉದ್ಘಾಟಿಸುವರು.

ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೂಡಿಗೆ ಕ್ರೀಡಾ ಶಾಲೆ ನಿವೃತ್ತ ಪ್ರಾಂಶುಪಾಲೆ ಕುಮತಿ ಬೋಪಯ್ಯ, ನಗರ ದಸರಾ ಸಮಿತಿ ಖಜಾಂಚಿ ಸಬಿತಾ ವಿಜಯ್, ದಸರಾ ಸಾಂಸ್ಕೃತಿಕ ಸಮಿತಿ ಉಸ್ತುವಾರಿ ಅನಿತಾ ಪೂವಯ್ಯ, ಸಾಧನಾ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಪುಷ್ಪಾವತಿ, ಮಡಿಕೇರಿ ನಗರ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕಿ ಎಸ್. ಅನ್ನಪೂರ್ಣ, ಮಡಿಕೇರಿ ನಗರಾಭಿವೃದ್ಧಿ ಸದಸ್ಯೆ ಮಿನಾಝ್ ಪ್ರವೀಣ್, ಒಡಿಪಿ ಸಂಸ್ಥೆ ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನೇಜಸ್, ನಗರ ಸಭಾ ಸದಸ್ಯರಾದ ಸವಿತಾ ರಾಕೇಶ್, ಚಿತ್ರಾವತಿ, ಮೇರಿ ವೇಗಸ್, ನೀಮಾ ಅರ್ಷದ್, ಸಿ.ಕೆ.ಮಂಜುಳಾ, ಕೆ.ಉಷಾ, ವೈ.ಡಿ.ಶ್ವೇತಾ, ಎಚ್.ಎನ್. ಶಾರದಾ, ನಾಮ ನಿರ್ದೇಶಿತ ಸದಸ್ಯೆ ಜುಲೇಕಾಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸಬಿತಾ ಉಪಸ್ಥಿತರಿರಲಿದ್ದಾರೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ಮನರಂಜನಾ ಸ್ಪರ್ಧೆಗಳು:

ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸೀರೆಗೆ ನಿಖರ ಬೆಲೆ ಹೇಳುವುದು, ಬಾಂಬ್ ಇನ್‌ ದ ಸಿಟಿ, ಕೆರೆ ದಡ ಆಟ, ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಭಾರತೀಯ ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ಕೇಶ ವಿನ್ಯಾಸ ಸ್ಪರ್ಧೆ, ಬಲೂನ್ ಮತ್ತು ಕಪ್‌ ಹಣೆಯಲ್ಲಿ ಇಟ್ಟು ಬಿಸ್ಕೆಟ್ ತಿನ್ನುವುದು, ಜಾನಪದ ನೃತ್ಯ ಸ್ಪರ್ಧೆ, ಬಲೂನ್ ಕಾಲಲ್ಲಿ ಹಿಡಿದು ಓಡುವುದು, ದಸರಾ ಸಂಬಂಧಿತ ರಸಪ್ರಶ್ನೆ ಸ್ಪರ್ಧೆ, ವಾಲಗ ಕುಣಿತ ಸ್ಪರ್ಧೆ ನಡೆಯಲಿದೆ.

ಸಾಧಕರಿಗೆ ಸನ್ಮಾನ:

ಮಹಿಳಾ ದಸರಾ ಸಂಭ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ, ಪೌರಸೇವಾ ನೌಕರರನ್ನು ಸನ್ಮಾನಿಲಾಗುವುದು.

ಸಾಂಸ್ಕೃತಿಕ ವೈಭವ:

ಸಂಜೆ ೬ ಗಂಟೆಯಿಂದ ಕಲಾ ಸಂಭ್ರಮ ವೇದಿಕೆಯಲ್ಲಿ ಮಹಿಳೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ ಎಂದು ಸಂತೋಷ್ ತಿಳಿಸಿದ್ದಾರೆ.