ಸಾರಾಂಶ
ಜಿಲ್ಲೆಯಲ್ಲಿ ಪ್ರತಿಷ್ಠಿತ ಪಂಚಾಯ್ತಿಗಳಲ್ಲಿ ಒಂದಾಗಿರುವ ಅಣ್ಣೂರು ಈಗಾಗಲೇ ಹಲವು ಸಾಧನೆಗಳನ್ನು ಮಾಡಿ ಕೇಂದ್ರ ಸರ್ಕಾರದ ಮೂರು, ರಾಜ್ಯ ಸರಕಾರದ ಮೂರು ಹಾಗೂ ಜಿಲ್ಲಾ ಮಟ್ಟದ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಬಿ.ಎಸ್.ಸುನೀಲ್
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಪಂಚಾಯತ್ ರಾಜ್ ದಿನದ ಅಂಗವಾಗಿ ಅಣ್ಣೂರು ಪಂಚಾಯ್ತಿ ವ್ಯಾಪ್ತಿಯ ಮೂರು ಗ್ರಾಮಗಳ ಮನೆಗಳ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದು ಗಮನ ಸೆಳೆಯಿತು.
ಮದ್ದೂರು ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣೂರು, ಅಲಭುಜನಹಳ್ಳಿ, ಕಾರ್ಕಳ್ಳಿ ಗ್ರಾಮಗಳ ಜನತೆ ಪಂಚಾಯತ್ ರಾಜ್ ದಿನವನ್ನು ಹಬ್ಬದಂತೆ ಆಚರಿಸುತ್ತಿದ್ದು, ಮಹಿಳಾ ಸ್ನೇಹಿ ಅಭಿಯಾನ ಪ್ರಯುಕ್ತ ಮಾ.8 ರಿಂದ ವಾರಕ್ಕೊಂದು ಕಾರ್ಯಕ್ರಮ ಆಯೋಜಿಸಿ ಗ್ರಾಪಂ ವ್ಯಾಪ್ತಿ ಮನೆಗಳ ಮುಂದೆ ಮಹಿಳೆಯರು ಮುಂಜಾನೆಯೇ ಮನೆ ಮುಂದೆ ರಂಗೊಲಿ ಬಿಟ್ಟು ಶುಭಾಶಯ ತಿಳಿಸಲು ಪ್ರೇರೆಪಿಸಿದ ಪರಿಣಾಮ ವಿವಿಧ ಬಗೆಯ ರಂಗೋಲಿ ಬಿಟ್ಟು ಶುಭ ಕೋರಿದರು.ಮೂರು ಗ್ರಾಮಗಳ ಸುಮಾರು ಒಂದೂವರೆ ಸಾವಿರ ಮನೆಗಳ ಮುಂದೆ ಮಹಿಳೆಯರು ನಸುಕಿನಲ್ಲಿಯೇ ಬಣ್ಣದ ರಂಗೊಲಿ ಬಿಟ್ಟು, ಗ್ರಾಮದ ಪ್ರಮುಖ ದ್ವಾರಗಳಿಗೆ ತಳಿರು, ತೋರಣ ಕಟ್ಟಿ ಸಿಂಗರಿಸಿದ ಪಂಚಾಯುತ್ ರಾಜ್ ದಿನದ ಶುಭಾಶಯ ತಿಳಿಸಿ, ದೇಶದಲ್ಲೇ ಮಾದರಿ ಜೊತೆಗೆ ಹಿರಿಮೆ ತಂದು ದಾಖಲೆಗೆ ಪಾತ್ರರಾದರು. ಗ್ರಾಮದ ಸರಕಾರಿ ಕಚೇರಿ, ಸಹಕಾರಿ- ಸಂಸ್ಥೆಗಳು, ಶಾಲಾ ಕಾಲೇಜು, ವಸತಿ ಶಾಲೆ, ಅಂಗನವಾಡಿಗಳ ಮುಂದೆಯೂ ಸಿಬ್ಬಂದಿ ರಂಗೊಲಿ ಬಿಟ್ಟು ಏಕತೆ ಮೆರೆದರು.
ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಗ್ರಾಮ ಪಂಚಾಯ್ತಿ:ಜಿಲ್ಲೆಯಲ್ಲಿ ಪ್ರತಿಷ್ಠಿತ ಪಂಚಾಯ್ತಿಗಳಲ್ಲಿ ಒಂದಾಗಿರುವ ಅಣ್ಣೂರು ಈಗಾಗಲೇ ಹಲವು ಸಾಧನೆಗಳನ್ನು ಮಾಡಿ ಕೇಂದ್ರ ಸರ್ಕಾರದ ಮೂರು, ರಾಜ್ಯ ಸರಕಾರದ ಮೂರು ಹಾಗೂ ಜಿಲ್ಲಾ ಮಟ್ಟದ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಮೂರು ಕೇಂದ್ರ ಸರಕಾರದ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರ, ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ರಾಜ್ ಸಶಕ್ತೀಕರಣ, ನಾನಾಜೀ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಪುರಸ್ಕಾರ, ರಾಜ್ಯದ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ, ಜಿಲ್ಲಾ ಮಟ್ಟದ ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ, ಸ್ತ್ರೀ ಪ್ರಗತಿ, ಎಸ್.ಡಿ. ಜಯರಾಮು, ಎಚ್.ಡಿ. ಚೌಡಯ್ಯ ಗ್ರಾಮೀಣ ಅಭಿವೃದ್ಧಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.