ಗೌರಿಯನ್ನು ಪೂಜಿಸಿ ಬಾಗಿನ ಕೊಟ್ಟು ಸಂಭ್ರಮಿಸಿದ ಮಹಿಳೆಯರು

| Published : Aug 27 2025, 01:00 AM IST

ಸಾರಾಂಶ

ಮಂಡ್ಯ ನಗರದ ಶ್ರೀಚಾಮುಂಡೇಶ್ವರಿ ದೇವಸ್ಥಾನ, ಶ್ರೀವಿದ್ಯಾ ಗಣಪತಿ ದೇವಸ್ಥಾನ, ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಶ್ರೀಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಮಹಿಳೆಯರು ಗೌರಿಮೂರ್ತಿಗೆ ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗೌರಿ ಹಬ್ಬದ ದಿನವಾದ ಮಂಗಳವಾರ ಮಹಿಳೆಯರು ಗೌರಿ ಮೂರ್ತಿಗೆ ಪೂಜೆ ಸಲ್ಲಿಸಿ ಸುಮಂಗಲಿಯರಿಗೆ ಬಾಗಿನ ಸಮರ್ಪಿಸುವ ಮೂಲಕ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ನಗರದ ಶ್ರೀಚಾಮುಂಡೇಶ್ವರಿ ದೇವಸ್ಥಾನ, ಶ್ರೀವಿದ್ಯಾ ಗಣಪತಿ ದೇವಸ್ಥಾನ, ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಶ್ರೀಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ದೇವಾಲಯಕ್ಕೆ ಆಗಮಿಸಿದ ಮಹಿಳೆಯರು ಗೌರಿಮೂರ್ತಿಗೆ ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು. ನಂತರ ದೇವಾಲಯಕ್ಕೆ ಆಗಮಿಸಿದ್ದ ಮಹಿಳೆಯರು ಪರಸ್ಪರ ಬಳೆ ಬಾಗಿನ ಕೊಟ್ಟು ಅರಿಶಿನ ಕುಂಕುಮ ವಿನಿಮಯ ಮಾಡಿಕೊಂಡರು.

ಕೆಲವರು ಮನೆಗಳಲ್ಲಿ ಗೌರಿಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ನೈವೇದ್ಯವಾಗಿ ರವೆ ಉಂಡೆ, ಕೊಬ್ಬರಿ ಮಿಠಾಯಿ,, ರಸಾಯನ ಸೇರಿದಂತೆ ವಿವಿಧ ತಿಂಡಿಗಳನ್ನು ತಯಾರಿಸಿ ಇಟ್ಟಿದ್ದರು.ಬೃಹನ್ಮಠದಲ್ಲಿ ಗೌರಿ ಮುತ್ತೈದೆಯರಿಂದ ಪೂಜೆ ಸಲ್ಲಿಕೆ

ಹಲಗೂರು: ಬೃಹನ್ಮಠದಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿ ಮಹಿಳೆಯರು ಪೂಜೆ ಸಲ್ಲಿಸಿದರು.

ಗ್ರಾಮದ ವೀರಶೈವ ಸದ್ಭಕ್ತರು ಮುಂಜಾನೆ ತೊರೆಕಾಡನಹಳ್ಳಿ ಸಮೀಪ ಹರಿಯುತ್ತಿರುವ ಶಿಂಷಾ ನದಿ ತೀರದಿಂದ ಮರಳಿನಿಂದ ಮಾಡಿದ ಸ್ವರ್ಣ ಗೌರಿಯನ್ನು ಹಲಗೂರಿಗೆ ತಂದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬೃಹನ್ಮಠಕ್ಕೆ ತಂದು ಮುತ್ತೈದೆಯರು ಪೂಜೆ ಸಲ್ಲಿಸಿ ಗೌರಮ್ಮನಿಗೆ ಬಾಗಿನ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಅಗೋರ ದೇವಿ ಅರ್ಚಕ ಹಾಗೂ ವಿದ್ವಾಂಸ ಪ್ರಸಾದ್ ,ಸ್ವರ್ಣ ಗೌರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಭಕ್ತರಿಗೆ ಮಹಾಮಂಗಳಾರತಿ ನೀಡಿ ಮಾತನಾಡಿ, ಸಾಂಪ್ರದಾಯಕವಾಗಿ ಸ್ವರ್ಣ ಗೌರಿಯನ್ನು ಹಲಗೂರು ಬೃಹನ್ಮಠದಲ್ಲಿ ಪ್ರತಿಷ್ಠಾಪಿಸಲಾಗಿದ್ದು, 9 ದಿನಗಳ ಕಾಲ ವಿಶೇಷವಾಗಿ ಭಕ್ತರಿಂದ ಪೂಜೆ ನಡೆಯಲಿದೆ ಎಂದರು.

9 ದಿನಗಳ ನಂತರ ಸ್ವರ್ಣ ಗೌರಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ವೀರಗಾಸೆ ಮತ್ತು ಚಟ್ಟಿಮೇಳೆದೊಂದಿಗೆ ಅಮ್ಮನವರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಗುತ್ತದೆ ಎಂದು ಸ್ವರ್ಣ ಗೌರಿ ಭಕ್ತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.