ಮಹಿಳೆಯರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿ: ಡಾ.ರಮೇಶ

| Published : Apr 02 2024, 01:01 AM IST

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿ: ಡಾ.ರಮೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಮಹಾರಾಷ್ಟ್ರದ ಉದಗಿರದ ಉದಯಗಿರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಮೂಲಗೆ ಸಲಹೆ ನೀಡಿದರು.

ಬೀದರ್‌: ಮಹಿಳೆಯರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಮಹಾರಾಷ್ಟ್ರದ ಉದಗಿರದ ಉದಯಗಿರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಮೂಲಗೆ ಸಲಹೆ ನೀಡಿದರು.

ಅಹಿಲ್ಯಾಬಾಯಿ ಹೋಳ್ಕರ್‌ ಸಾಂಸ್ಕೃತಿಕ ಮಹಿಳಾ ಸಂಘದಿಂದ ಇಲ್ಲಿಯ ಕುಂಬಾರವಾಡದ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಾಧಕರ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಪರಸ್ಪರರ ಬೆಳವಣಿಗೆಗೆ ಸಹಕರಿಸಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಅಹಿಲ್ಯಾಬಾಯಿ ಹೋಳ್ಕರ್‌ ಅವರ ಜೀವನ ಹಾಗೂ ಸಾಧನೆಯನ್ನು ಮಹಿಳೆಯರು ಅರಿಯಬೇಕು. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, ಮಹಿಳೆ ದಯೆ, ಕರುಣೆ, ಸಹನೆ, ತ್ಯಾಗದ ಪ್ರತೀಕವಾಗಿದ್ದಾಳೆ. ಮಹಿಳೆಯರು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ಏನನ್ನಾದರೂ ಸಾಧನೆ ಮಾಡಬೇಕು. ಈ ಮೂಲಕ ಇತರರಿಗೆ ಆದರ್ಶಪ್ರಾಯರಾಗಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷೆ ಕಾಂಚನಾ ಮಾತನಾಡಿ, ಮಹಿಳೆಯರನ್ನು ಸಾಧನೆಗೆ ಪ್ರೇರೇಪಿಸುವ ದಿಸೆಯಲ್ಲಿ ಸಂಘ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಚಿಂತಕಿ ಸಿದ್ದಮ್ಮ ಬಸವಣ್ಣನವರ್‌, ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು. ಪುರುಷರಿಗೆ ಸರಿ ಸಮನಾದ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಮುಖ್ಯಶಿಕ್ಷಕಿ ಶೀಲಾ ಮಲ್ಕಾಪುರೆ, ಶಿಕ್ಷಕಿ ಶಶಿಕಲಾ ಮೇತ್ರೆ ಮಾತನಾಡಿದರು. ಎ.ಎಸ್‌ ಸಂಗೀತಾ ಮಾರ್ಕಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಸುನಿತಾ ಮರಕಲ್‌, ಸರಸ್ವತಿ ಮಲ್ಕಾಪುರ, ಅನುಸೂಯಾ ಸೋಲಪುರ ಹಾಗೂ ಶಾಂತಮ್ಮ ಡೊಣಗಾಪುರ ಅವರನ್ನು ಸತ್ಕರಿಸಲಾಯಿತು.

ಕಲಾವಿದರಾದ ಮನೋಹರ ಹುಪಳಾ, ವೀರಶೆಟ್ಟಿ ರಾಜೋಳಿ, ಮಲ್ಲಿಕಾರ್ಜುನ ಮಲ್ಕಾಪುರ, ಬಸವರಾಜ, ಶಾಂತಮ್ಮ ಡೊಣಗಾಪುರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮೀನಾಕ್ಷಿ ಚಿಲ್ಲರ್ಗಿ ಸ್ವಾಗತಿಸಿ ಆತ್ಮಾನಂದ ಬಂಬಳಗಿ ನಿರೂಪಿಸಿದರೆ ಅನೀಲ್‌ ಚಿಲ್ಲರ್ಗಿ ವಂದಿಸಿದರು.