ಮಠ ಮಾನ್ಯರಿಂದ ಮಹಿಳಾ ಸಬಲೀಕರಣ: ಬಿಎಸ್‌ವೈ ಶ್ಲಾಘನೆ

| Published : Feb 13 2024, 12:47 AM IST

ಸಾರಾಂಶ

ಶಿಕಾರಿಪುರದ ಹೊಸ ಸಂತೆ ಮೈದಾನದಲ್ಲಿ ಭಾನುವಾರ ಸಂಜೆ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸ್ವ-ಸಹಾಯ ಸಂಘಗಳ ರಾಜ್ಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಮಠಮಾನ್ಯಗಳು ಜನಜಾಗೃತಿ ಮೂಡಿಸುತ್ತಿವೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸದೃಢ ಸಮಾಜ ನಿರ್ಮಾಣದಲ್ಲಿ ಮಠ ಮಾನ್ಯದ ಸೇವೆ ಅತ್ಯಂತ ವಿಶಿಷ್ಟವಾಗಿದ್ದು, ಅನ್ನ, ಆಹಾರ, ಶಿಕ್ಷಣ ದಾಸೋಹ ಮೂಲಕ ಜನಸಾಮಾನ್ಯರಲ್ಲಿ ಜನಜಾಗೃತಿಯನ್ನು ಮೂಡಿಸುತ್ತಿದೆ ಈ ದಿಸೆಯಲ್ಲಿ ಪುಷ್ಪಗಿರಿ ಮಠ ಮಹಿಳಾ ಸ್ವಸಹಾಯ ಗುಂಪು ರಚಿಸಿ ಸೂಕ್ತ ಮಾರ್ಗದರ್ಶನ ಮೂಲಕ ಪರಸ್ಪರ ಸಹಕಾರದ ಆಧಾರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಮ್ಮೆ ವ್ಯಕ್ತಪಡಿಸಿದರು.

ಭಾನುವಾರ ಸಂಜೆ ಪಟ್ಟಣದ ಹೊಸಸಂತೆ ಮೈದಾನದಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸ್ವ-ಸಹಾಯ ಸಂಘಗಳ ರಾಜ್ಯ ಮಟ್ಟದ ಸಮಾವೇಶ ಹಾಗೂ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಳ್ಳವರು ಬಡವರ ಸೇವೆ ಮಾಡುವಂತೆ ಪ್ರೇರೇಪಿಸುವಲ್ಲಿ ಮಠ ಮಾನ್ಯಗಳು ಶಿವಶರಣರು ಸಾಧುಸಂತರ ಸೇವೆ ಅನನ್ಯವಾದದು, ಈ ದಿಸೆಯಲ್ಲಿ ಪುಷ್ಪಗಿರಿ ಮಠ ಮಹಿಳಾ ಸ್ವಸಹಾಯ ಗುಂಪು ರಚಿಸಿ ಸೂಕ್ತ ಮಾರ್ಗದರ್ಶನ ಮೂಲಕ ಪರಸ್ಪರ ಸಹಕಾರದ ಆಧಾರದಲ್ಲಿ ಕಾರ್ಯಕ್ರಮ ನಡೆಸುತ್ತಿದೆ ಈ ವರ್ಷ ರಾಜ್ಯ ಮಟ್ಟದ ಸಮಾವೇಶ ಶಿಕಾರಿಪುರ ದಲ್ಲಿ ಆಯೋಜಿಸಲಾಗಿರುವುದು ಹೆಮ್ಮೆಯ ಸಂಗತಿ ಎಂದು ಸಂಸತ ವ್ಯಕ್ತಪಡಿಸಿದ ಅವರು, 2020 ರಲ್ಲಿ ಆರಂಭವಾದ ಸಂಘ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಉ.ಕನ್ನಡ ಜಿಲ್ಲೆ ಸಹಿತ ವಿವಿಧೆಡೆ 2400 ಕ್ಕೂ ಹೆಚ್ಚು ಸ್ವಸಹಾಯ ಸಂಘದ ಮೂಲಕ 40 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆರ್ಥಿಕ ಶಕ್ತಿಯನ್ನು ತುಂಬುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಹೊಸ ಆರ್ಥಿಕ, ಶೈಕ್ಷಣಿಕ ಕ್ರಾಂತಿಯನ್ನು ಹುಟ್ಟುಹಾಕಲು ವೇದಿಕೆ ಸಿದ್ಧವಾಗಿದೆ. ಈ ಕಾರ್ಯದಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀಗಳ ಪಾತ್ರ ಬಹು ಮಹತ್ವವಾಗಿದೆ ಎಂದು ಬಣ್ಣಿಸಿದರು.

ಇತಿಹಾಸದಲ್ಲಿ ಮಹಿಳಾ ಶಕ್ತಿಯ ಮೂಲಕ ಆರಂಭವಾದ ಕ್ರಾಂತಿ ವಿಫಲವಾಗಿದ್ದು ವಿರಳ ಎಂದ ಅವರು ಸಾವಿತ್ರಿಬಾಯಿ ಪುಲೆ, ಮದರ್ ತೆರೆಸಾ, ಅನಿಬೆಸಂಟ್, ಮೇಧಾ ಪಾಟ್ಕರಂಥ ಮಹನೀಯರನ್ನು ಈಗ ಜ್ಞಾಪಿಸಿಕೊಳ್ಳಬೇಕಾಗಿದೆ. ಅಕ್ಕಮಹಾದೇವಿ ಅಲ್ಲಮಪ್ರಭು ಜನಿಸಿದ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಸಮಾವೇಶ ಅತ್ಯಂತ ಸಮಯೋಚಿತವಾಗಿದೆ ಎಂದೂ ತಿಳಿಸಿದರು.

ಸಂಸದ ರಾಘವೇಂದ್ರ ಮಾತನಾಡಿ, ತೊಟ್ಟಿಲು ತೂಗುವ ಕೈಗೆ ಸ್ವಾವಲಂಬನೆಯ ಶಕ್ತಿ ನೀಡಿದಲ್ಲಿ ಏನೂ ಬೇಕಾದರೂ ಸಾಧಿಸಬಲ್ಲಳು ಎಂಬುದು ಮಹಿಳೆಯರು ಇತ್ತೀಚಿನ ವರ್ಷದಲ್ಲಿ ಎಲ್ಲ ಕ್ಷೇತ್ರದಲ್ಲಿ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದ ಅವರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು ಸ್ವಾಭಿಮಾನದ ಬದುಕು ನಡೆಸಲು ಸಂಘ ಎಲ್ಲ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದರು.

ಚಿತ್ರ ನಟಿ, ವಿ.ಪ. ಮಾಜಿ ಸದಸ್ಯೆ ತಾರಾ ಅನುರಾಧ ಮಾತನಾಡಿ, ಮಹಿಳೆಯರ ಸಂಕಲ್ಪ ಶಕ್ತಿಗೆ ಜಗತ್ತು ಗೆಲ್ಲುವ ತಾಕತ್ತು ಇದೆ. ಪುಷ್ಪಗಿರಿ ಮಠದ ಶ್ರೀಗಳು ಸ್ವಸಹಾಯ ಸಂಘ ಆರಂಭದ ಮೂಲಕ ಮಹಿಳೆಯರಿಗೆ ಸದೃಢ ಬದುಕು ಕಲ್ಪಿಸಿಕೊಡುವ ಗುರಿ ಹೊಂದಿದ್ದು, ಬಿಟ್ಟಿಭಾಗ್ಯಗಳಿಗೆ ಭವಿಷ್ಯವಿಲ್ಲ. ಸಸಿ ಬೆಳೆದು ಬೃಹದಾಕಾರವಾದಲ್ಲಿ ಮಾತ್ರ ಫಲ ನೀಡಲಿದೆ ಎಂಬ ಸತ್ಯ ಪ್ರತಿಯೊಬ್ಬರೂ ಅರಿಯಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು, ಯಡಿಯೂರಪ್ಪನವರ ಮೂಲಕ ಚಾಲನೆ ಗೊಂಡ ಸಂಘ ಆರಂಭಗೊಂಡ ಕೇವಲ 3 ವರ್ಷದಲ್ಲಿ 3 ಸಾವಿರ ಸಂಘದ ಮೂಲಕ ವೇಗವಾಗಿ ಅಭಿವೃದ್ಧಿ ಹೊಂದಿದ್ದು, ದೇಶದ ಬದಲಾವಣೆಯಲ್ಲಿ ಮಹಿಳೆಯರು ಮುಂಚೂಣಿ ಯಲ್ಲಿರಬೇಕು. ಮಾತೃ ಸ್ವರೂಪದ ಸ್ತ್ರೀಯರಿಂದ ಮಾತ್ರ ಗ್ರಾಮ, ಜಿಲ್ಲೆ, ರಾಜ್ಯ, ದೇಶವನ್ನು ಸುಸಂಸ್ಕೃತವಾಗಿಸಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಯುವ ರೈತ ಸಂಘ, ವಿದ್ಯಾರ್ಥಿ ಸಂಘಕ್ಕೆ ತಲಾ ₹10 ಸಾವಿರದ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು. ವೇದಿಕೆಯಲ್ಲಿ ಸಂಸದ ಬಸವರಾಜ, ಶಾಸಕ ಬಿ.ಪಿ ಹರೀಶ್, ಭಾರತಿ ಶೆಟ್ಟಿ, ತಾ.ನೊಳಂಬ ಸಮಾಜ ಅಧ್ಯಕ್ಷ ಲೋಹಿತ್, ಬಿ.ಡಿ ಭೂಕಾಂತ್,ಉದ್ಯಮಿ ಪರಮೇಶ್ವರಪ್ಪ ಕಾಗಿನಲ್ಲಿ, ಪರಮೇಶ್ ಲಿಂಗಾಯಿತ, ಡಾ.ಧನಂಜಯ ಸರ್ಜಿ, ವಸಂತಗೌಡ, ಎಚ್.ಟಿ ಬಳಿಗಾರ್, ಗುರುರಾಜ ಜಕ್ಕಿನಕೊಪ್ಪ, ಶಶಿಧರ ಚುರ್ಚುಗುಂಡಿ ಮತ್ತಿತರರು ಉಪಸ್ಥಿತರಿದ್ದರು.