ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಕಾರ್ಯ ಶ್ಲಾಘನೀಯ ಎಂದು ಸಾವಿರ ದೇವರ ಸಂಸ್ಥಾನ ಮಠದ ವೀರ ತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಕವಿತಾಳ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಕಾರ್ಯ ಶ್ಲಾಘನೀಯ ಎಂದು ಸಾವಿರ ದೇವರ ಸಂಸ್ಥಾನ ಮಠದ ವೀರ ತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮಿ ಹೇಳಿದರು.ಪಟ್ಟಣದ ಕಲ್ಮಠದ ಆವರಣದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಜೀವನ ಪಾವನವಾಗುತ್ತದೆ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ರಾಘವೇಂದ್ರ ಮಾತನಾಡಿ ಮಹಿಳೆಯರು ಟಿವಿ ಧಾರಾವಾಹಿಗಳನ್ನು ನೋಡುವುದರಿಂದ ಸಂಸಾರದಲ್ಲಿ ಬಿರುಕು ಮೂಡುವ ಘಟನೆಗಳು ಹೆಚ್ಚುತ್ತಿವೆ ಮಠ ಮಂದಿರಗಳಲ್ಲಿ ನಡೆಯುವ ಪುರಾಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಪೋಷಕರು ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಬೇಕು ಎಂದರು.ತಾಲೂಕು ಯೋಜನಾಧಿಕಾರಿ ಸಂದೀಪ ನಾಯಕ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ತ್ರಯಂಬಕೇಶ್ವರ ದೇವಸ್ಥಾನದಿಂದ ಕಲ್ಮಠದವರೆಗೆ ಮಂಜುನಾಥ ಸ್ವಾಮಿಯ ಭಾವಚಿತ್ರದೊಂದಿಗೆ ಕುಂಭ ಕಳಸದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ರಾಯಚೂರಿನ ಅಭಿನವ ರಾಯಚೋಟಿ ಮಹಾಸ್ವಾಮಿಗಳು, ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಪಪಂ ಅಧ್ಯಕ್ಷೆ ರಾಜೇಶ್ವರಿ ತಿಪ್ಪಯ್ಯ, ಸುಮಂಗಲ, ಅಮರೇಶ ದಿನ್ನಿ, ಕೊಟ್ರೇಶ ಸಾಲಿಮಠ ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಾರ್ಥನೆ ಗೀತೆ ಹಾಡಿದರು.-------------------
15ಕೆಪಿಕೆವಿಟಿ01: ಕವಿತಾಳ ಪಟ್ಟಣದ ಕಲ್ಮಠದ ಆವರಣದಲ್ಲಿ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಮಠದ ಸ್ವಾಮೀಜಿಗಳ, ಗಣ್ಯರು ಉದ್ಘಾಟಿಸಿದರು.