ಸಾರಾಂಶ
ಹುಬ್ಬಳ್ಳಿ: ನಿರುದ್ಯೋಗಿ ಮಹಿಳೆಯರು ತಾವು ಪಡೆದ ಸ್ವ ಉದ್ಯೋಗದ ತರಬೇತಿಯನ್ನು ವೃತ್ತಿಗೆ ಪೂರಕವಾಗಿ ಬಳಸಿಕೊಂಡಾಗ ತರಬೇತಿ ಪಡೆದದ್ದಕ್ಕೂ ಸಾರ್ಥಕವಾಗುತ್ತದೆ. ಪುರುಷರಂತೆ ಮಹಿಳೆಯರೂ ಸ್ವಾವಲಂಬಿ ಜೀವನ ನಡೆಸುವಂತಾಗಲಿ ಎಂದು ಜ್ಯೋತಿ ಜೋಶಿ ಹೇಳಿದರು.
ಮಂಗಳವಾರ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಸ್ತಾವನೆಯ ಮೇರೆಗೆ ಗ್ರಾಮ ವಿಕಾಸ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ಉಚಿತ ವೃತ್ತಿಪರ ತರಬೇತಿ ಮೂಲಕ ವಿವಿಧ ಕಂಪನಿಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಗಮನಾರ್ಹ ವ್ಯವಹಾರ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಆರ್ಥಿಕ ಬದಲಾವಣೆಗಳನ್ನು ತರುವ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಮಹಿಳಾ ಮಾಲೀಕತ್ವದ ಉದ್ಯಮಗಳು ಸಮಾಜದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.
ಮಹಿಳೆಯರು ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಯಾವುದೇ ಉದ್ಯಮ ಆರಂಭಿಸಿದರೂ ಯಶಸ್ಸು ಸಾಧಿಸಲು ಸಾಧ್ಯ. ಪಡೆದ ಯಾವುದೇ ತರಬೇತಿ ಪರಿಪೂರ್ಣವಾಗಬೇಕಾದರೆ ಮುಂದಿನ ಬದುಕಿಗೆ ಆದಾಯ ತರುವ ಮಾರ್ಗವಾಗಿ ಆ ತರಬೇತಿಯನ್ನು ರೂಪಿಸಿಕೊಳ್ಳಬೇಕು ಎಂದರು.ದೇಶದಲ್ಲಿ ಸಮತೋಲಿತ ಬೆಳವಣಿಗೆಗಾಗಿ ಮಹಿಳಾ ಉದ್ಯಮಿಗಳ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯೊಂದಿಗೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ವರ್ಗದ ಮಹಿಳೆಯರ ಅಭಿವೃದ್ಧಿಗೆ ಅನುಕೂಲವಾಗಿರುವ ಅನೇಕ ಮಹಿಳಾ ಪರ ಯೋಜನೆಗಳನ್ನು ರೂಪಿಸಿದೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ, ಎಲ್ಲ ಜಾತಿ, ಸಮುದಾಯಗಳ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಭರವಸೆಯಾಗಿದೆ ಎಂದರು.
ಗ್ರಾಮ ವಿಕಾಸ ಸೊಸೈಟಿ ಸಿಇಒ ಜಗದೀಶ ನಾಯಕ್ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ವಿವಿಧ ಕಂಪನಿಗಳಾದ ಓರಿಯಂಟ್ ಸಿಮೆಂಟ್, ಎನ್.ಎಲ್.ಸಿ, ಜೆಕೆ ಸಿಮೆಂಟ್, ಮೈ ಹೋಂ ಗ್ರುಪ್, ಜೆ.ಎಸ್.ಡಬ್ಲ್ಯೂ ಹಾಗೂ ಹಿಂಡಲಗಾ ಕಂಪನಿಗಳ ಪ್ರಯೋಜಕತ್ವ ಹಾಗೂ ಗ್ರಾಮ ವಿಕಾಸ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ಉಚಿತ ವೃತ್ತಿಪರ ತರಬೇತಿ ನೀಡುವುದರೊಂದಿಗೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ಯಡ್ರಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಹಂಗರಕಿ, ಮಧು ಹುಬ್ಬಳ್ಳಿ, ಶಿವಾನಂದ ನವಲೂರ, ಜೀವನಮುಕ್ತ ಬೈಲಮ್ಮನವರ, ಜಗದೀಶ ರೂಗಿ, ಸಂತೋಷ ಜೀವಣ್ಣವರ, ಸಿದ್ದು ರೂಗಿ, ಮಂಜು ಬೆಂಗೇರಿ, ಹನುಮಂತಗೌಡ ಗಿರಿಯಪ್ಪಗೌಡ್ರ ಸೇರಿದಂತೆ ಹಲವರಿದ್ದರು.