ಕನ್ನಡಪ್ರಭ ವಾರ್ತೆ ಬೆಳಗಾವಿರಾಜ್ಯ ಸಚಿವ ಸಂಪುಟದಲ್ಲಿ ಕಳೆದ ಆರು ತಿಂಗಳಿಂದ ಮಹಿಳಾ ಪ್ರತಿನಿಧಿ ಇಲ್ಲದಿರುವ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವರೊಬ್ಬರನ್ನು ಕಾಣಲಿದ್ದೀರಿ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಸಚಿವ ಸಂಪುಟದಲ್ಲಿ ಕಳೆದ ಆರು ತಿಂಗಳಿಂದ ಮಹಿಳಾ ಪ್ರತಿನಿಧಿ ಇಲ್ಲದಿರುವ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವರೊಬ್ಬರನ್ನು ಕಾಣಲಿದ್ದೀರಿ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟಕ್ಕೆ ಮಹಿಳಾ ಸಚಿವರನ್ನು ಸೇರ್ಪಡೆಗೊಳಿಸುವ ಕುರಿತು ಕೇಳಿದ ಪ್ರಶ್ನೆಗೆ, ನಾನು ಒಂದಕ್ಕೆ ಉತ್ತರ ಕೊಡುತ್ತೇನೆ. ಇನ್ನೊಂದಕ್ಕೆ ಉತ್ತರ ಕೊಡುವುದಿಲ್ಲ ಎಂದರು. ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವರನ್ನು ನೋಡುತ್ತೀರಿ. ಎರಡನೇ ಪ್ರಶ್ನೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುತ್ತಿ ಬಳಸಿ ನನ್ನ ಸುತ್ತಲೂ ಬರಬೇಡಿ ಎಂದರು.

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರಾಗಿ ತಮ್ಮನ್ನೇ ಮತ್ತೆ ಸೇರ್ಪಡೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ರಾಜಕಾರಣದಲ್ಲಿ ಕಾಲ ಒಂದೇ ರೀತಿ ಇರುವುದಿಲ್ಲ. ಅಧಿಕಾರವೂ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನರು ನೆನಪಿಸಿಕೊಳ್ಳುವಂತಹ ಕೆಲಸ ಮಾಡಬೇಕು. ಅಧಿಕಾರದ ಅವಧಿಯಲ್ಲಿ ನನ್ನ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದಲ್ಲಿ ಸಚಿವೆಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ಈಗ ನೀವೇ ಜನರು ಅದನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ ಎಂದರು.

ಎಸ್‌ಐಆರ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಅ‍ವರು, ರಾಜ್ಯಾದ್ಯಂತ ಗೊಂದಲ ಸೃಷ್ಟಿಯಾಗಿದೆ. ಬಿಜೆಪಿಯವರು ಕೆಲ ಮತದಾರರ ಹೆಸರುಗಳನ್ನು ಕೈಬಿಡುವಂತೆ ಫಾರಂ-6, ಫಾರಂ-7 ಅರ್ಜಿಗಳನ್ನು ನೀಡಿದ್ದಾರೆ. ಬೆಂಗಳೂರಿನಿಂದ ವಿಜಯಪುರ, ಬಳ್ಳಾರಿ ಹಾಗೂ ಬೆಳಗಾವಿ ಉತ್ತರ, ದಕ್ಷಿಣ ಸೇರಿದಂತೆ ರಾಜ್ಯದ ವಿವಿಧೆಡೆ ಇಂತಹ ಘಟನೆಗಳು ನಡೆದಿವೆ. ಬೆಳಗಾವಿ ದಕ್ಷಿಣ ಶಾಸಕರು ಇದಕ್ಕೆ ಚೆನ್ನಾಗಿ ಉತ್ತರ ಕೊಡುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಳಗಾವಿ ಗ್ರಾಮೀಣದಲ್ಲಿ ಈ ರೀತಿಯ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದರು.

ಮತ ಕಳವು ಮಾಡಿದ್ದರೆ ಇಲ್ಲಿ ಬಿಜೆಪಿ ಏಕೆ ಗೆದ್ದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಮತ ಕಳವು ಮಾಡಿ ಬಿಜೆಪಿ ಗೆದ್ದಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಚುನಾವಣಾ ಆಯೋಗದ ಸಹದ್ಯೋಗಿಗಳೇ ಪತ್ರ ಬರೆದಿದ್ದಾರೆ. ಇಡೀ ದೇಶವೇ ಛೀಮಾರಿ ಹಾಕುವಂತಾಗಿದೆ. ಬಿಜೆಪಿಯವರಿಗೆ ಅಧಿಕಾರವೇ ಮುಖ್ಯ, ಪ್ರಜಾಪ್ರಭುತ್ವ ಮುಖ್ಯವಲ್ಲ ಎಂದು ಟೀಕಿಸಿದರು.

ಬೆಳಗಾವಿ ಗ್ರಾಮೀಣ ಹೊಸ ತಾಲೂಕಿಗೆ ಚಾಲನೆ

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತ್ಯೇಕ ತಾಲೂಕಾಗಿ ರೂಪಿಸುವ ಪ್ರಯತ್ನ ಮುಂದುವರಿದಿದೆ. ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊಸ ತಾಲೂಕಿಗೆ ಚಾಲನೆ ನೀಡಲಾಗುವುದು. ತಹಸೀಲ್ದಾರ್, ಉಪ ನೋಂದಣಾಧಿಕಾರಿ ಸೇರಿದಂತೆ ಅಗತ್ಯ ಕಚೇರಿಗಳನ್ನು ಆರಂಭಿಸಲಾಗುವುದು. ಕ್ಷೇತ್ರದಲ್ಲಿ ಸುಮಾರು 8.5 ಲಕ್ಷ ಮತದಾರರಿದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಿದೆ.

ಸ್ವಚ್ಛ ಭಾರತ ಯೋಜನೆಯಡಿ ಪ್ರತಿಯೊಂದು ಗ್ರಾಪಂಗೆ 2ರಿಂದ 3 ವಾಹನಗಳು ಹಾಗೂ ಸಣ್ಣ ಗ್ರಾಮಗಳಿಗೆ ಕನಿಷ್ಠ 1 ವಾಹನ ಒದಗಿಸಲಾಗಿದೆ ಎಂದರು.

ತಮ್ಮ ಕ್ಷೇತ್ರದಲ್ಲಿ 156 ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನ, ಅಂಬೇಡ್ಕರ್, ವಾಲ್ಮೀಕಿ ಹಾಗೂ ಜೈನ ಸಮುದಾಯದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 35 ದೇವಸ್ಥಾನಗಳ ಟ್ರಸ್ಟ್‌ಗಳಿಗೆ ಅನುದಾನ ನೀಡಲಾಗಿದೆ. ದೇವಸ್ಥಾನಗಳ ಅಭಿವೃದ್ಧಿಯಷ್ಟೇ ಅಲ್ಲದೆ, ಸಾವಿರಾರು ಕೋಟಿ ರುಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆಗಳು, ಚರಂಡಿ, ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಕ್ಷೇತ್ರದ 114 ಗ್ರಾಮಗಳ ಪೈಕಿ ಒಂದೊಂದು ಗ್ರಾಮದಲ್ಲೂ 2-3 ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿ ನಡೆದಿದೆ ಎಂದರು.

ನಮ್ಮ ಮೇಲೆ ರಾಜಕೀಯ ಷಡ್ಯಂತ್ರ

ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಹೆಸ್ಕಾಂ ಅಧಿಕಾರಿಗಳಿಬ್ಬರ ಮೇಲಿನ ಹಲ್ಲೆ ಮಾಡಿದ್ದಾರೆಂಬ ಘಟನೆ ರಾಜಕೀಯ ಷಡ್ಯಂತ್ರವಾಗಿದೆ. ಆ ಘಟನೆಯನ್ನು ನಾನು ತಿರಸ್ಕರಿಸುತ್ತೇನೆ. ಆದರೆ, ಹೆಸ್ಕಾಂ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ವಿಚಾರ ನನಗೆ ಗೊತ್ತಿಲ್ಲ. ನಾವು ಜನರಿಗಾಗಿ ಕೆಲಸ ಮಾಡುತ್ತ ಬಂದಿದ್ದೇವೆ. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಂದ ಹಿಡಿದು ಲೈನ್‌ಮನ್‌ಗಳವರೆಗೆ ಎಲ್ಲರಿಗೂ ನಾವು ಸಹಾಯ ಮಾಡಿದ್ದೇವೆ. ಉಡುಪಿ ಭಾಗದಲ್ಲಿದ್ದ 13 ಜನ ಹೆಸ್ಕಾಂ ಸಿಬ್ಬಂದಿಯನ್ನು ಬೆಳಗಾವಿ ಗ್ರಾಮೀಣಕ್ಕೆ ಕರೆಸಿಕೊಂಡಿದ್ದೇನೆ. ಮಳೆಗಾಲ ಸಂದರ್ಭದಲ್ಲಿ ವಿದ್ಯುತ್‌ ಕಂಬ ಏರದಂತೆ ಲೈನ್‌ಮನ್‌ಗಳಿಗೆ ಮನವಿ ಮಾಡಿದ್ದೆ. ಆದರೆ, ಅಧಿಕಾರಿಬ್ಬರ ಮೇಲೆ ಹಲ್ಲೆ ಮಾಡಿದ್ದೇವೆ ಎಂಬ ಈ ಬೆಳವಣಿಗೆ ರಾಜಕೀಯ ಷಡ್ಯಂತ್ರದ ಮುಂದುವರೆದ ಭಾಗವಾಗಿದೆ. ನಾವು ಯಾವತ್ತೂ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಪ್ರತಿದಿನ 18 ಗಂಟೆಗೂ ಅಧಿಕ ಕಾಲ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಕೆಲವು ನಿರ್ಧಾರಗಳ ದಿನಾಂಕದಲ್ಲಿ ವ್ಯತ್ಯಾಸವಾಗಬಹುದು. ಸಂಪುಟ ವಿಸ್ತರಣೆ ಸೇರಿದಂತೆ ಮುಂದಿನ ರಾಜಕೀಯ ನಿರ್ಧಾರಗಳ ಸಂಪೂರ್ಣ ಅಧಿಕಾರವನ್ನು ಹೈಕಮಾಂಡ್‌ಗೆ ಬಿಟ್ಟುಕೊಟ್ಟಿದ್ದೇನೆ.

-ಲಕ್ಷ್ಮಿ ಹೆಬ್ಬಾಳಕರ, ಮಾಜಿ ಸಚಿವೆ, ಶಾಸಕಿ