ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಜಿಗುಪ್ಸೆ ಹೊಂದದೇ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ನುಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಜಿಗುಪ್ಸೆ ಹೊಂದದೇ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ನುಡಿದರು.

ಪಟ್ಟಣದ ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನವದುರ್ಗೆಯರ ಕಡೆಗೆ ನಮ್ಮ ನಡಿಗೆ ಹಾಗೂ ದುರ್ಗಾ ದೌಡ್‌ ನವರಾತ್ರಿ ನವಶಕ್ತಿ ವೈಭವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ, ಉದ್ಯೋಗ, ಸಾಮಾಜಿಕ ಸೇವೆ, ಧಾರ್ಮಿಕ ಚಟುವಟಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯ ಸಾಬೀತುಪಡಿಸುವ ಮೂಲಕ ಶ್ರೇಷ್ಠ ಬದುಕು ರೂಪಿಸಿಕೊಳ್ಳಬೇಕು. ಮಹಿಳೆಯರು ಸ್ವಾವಲಂಬಿಗಳಾಗಿ, ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದಾಗ ಮಾತ್ರ ನಿಜವಾದ ಗೌರವಕ್ಕೆ ಪಾತ್ರರಾಗಲು ಸಾಧ್ಯ ಎಂದರು.ಮಹಿಳೆ ಎಂದರೇ ಕೇವಲ ಕುಟುಂಬದ ಜವಾಬ್ದಾರಿ ನಿಭಾಯಿಸುವ ವ್ಯಕ್ತಿಯಲ್ಲ, ಕುಟುಂಬ, ಸಮಾಜ ಮತ್ತು ರಾಷ್ಟ್ರದ ಭವಿಷ್ಯ ರೂಪಿಸುವ ಶಕ್ತಿಯೂ ಹೌದು. ತಾಯಿ, ಸಹೋದರಿ, ಪತ್ನಿ ಹಾಗೂ ಮಗಳ ರೂಪದಲ್ಲಿ ಕುಟುಂಬದ ನೆಮ್ಮದಿಗೆ ಕಾರಣವಾಗುವ ಮಹಿಳೆ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುವ ಸಾಮರ್ಥ್ಯ ಹೊಂದಿದ್ದಾಳೆ. ಮಹಿಳೆಯರಲ್ಲಿರುವ ಪ್ರತಿಭೆ, ತಾಳ್ಮೆ, ಧೈರ್ಯ, ಕರುಣೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಸಮಾಜದ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ ಎಂದರು.ಮಹಿಳೆಯರ ಆತ್ಮವಿಶ್ವಾಸವೇ ಸಾಧನೆಯ ಮೊದಲ ಮೆಟ್ಟಿಲು ಮಹಿಳೆಯರು ತಮ್ಮ ಸಾಮರ್ಥ್ಯದ ಬಗ್ಗೆ ಕೀಳರಿಮೆ ಹೊಂದದೇ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಜೀವನದಲ್ಲಿ ಅಡೆತಡೆಗಳು ಎದುರಾದಾಗ ನಿರಾಶೆಗೊಳ್ಳದೆ, ಅವುಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಶಿಕ್ಷಣವು ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಶಕ್ತಿಯಾಗಿದ್ದು, ಜ್ಞಾನ ಮತ್ತು ಸಂಸ್ಕಾರಗಳ ಸಮನ್ವಯದಿಂದ ಮಹಿಳೆಯರು ತಮ್ಮ ಬದುಕನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬಹುದು. ಹೆಣ್ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸೂಕ್ತ ಅವಕಾಶ ಹಾಗೂ ಕುಟುಂಬದ ಬೆಂಬಲ ದೊರೆತರೆ ಅವರು ಯಾವುದೇ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.ಮಹಿಳೆಯರ ಪ್ರಗತಿ ಎಂದರೆ ಕೇವಲ ವೈಯಕ್ತಿಕ ಏಳಿಗೆಯಲ್ಲ. ಒಬ್ಬ ಮಹಿಳೆ ಶಿಕ್ಷಣ ಪಡೆದು ಸ್ವಾವಲಂಬಿಯಾದರೆ ಒಂದು ಕುಟುಂಬದ ಭವಿಷ್ಯ ಸುಧಾರಿಸುತ್ತದೆ. ಮಹಿಳೆಯರು ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಅನ್ಯಾಯ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದಾಗ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬಲ ದೊರೆಯುತ್ತದೆ. ಹೀಗಾಗಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸಬೇಕು ಎಂದರು.ಕಳಂಕರಹಿತ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳು ಅಗತ್ಯ ಇಂದಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಮ್ಮ ಪುರಾತನ ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಮರೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆಧುನಿಕತೆ ಮತ್ತು ತಂತ್ರಜ್ಞಾನ ಸ್ವೀಕರಿಸುವುದು ತಪ್ಪಲ್ಲ. ಆದರೆ, ಅವುಗಳೊಂದಿಗೆ ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳು, ಹಿರಿಯರ ಮೇಲಿನ ಗೌರವ ಮತ್ತು ಕುಟುಂಬದ ಬಾಂಧವ್ಯಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ನಮ್ಮ ಪರಂಪರೆಯಲ್ಲಿರುವ ಉತ್ತಮ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಂದು ಕುಟುಂಬಕ್ಕೂ ಇದೆ ಎಂದರು.ನೇತಾಜಿ ನಲವಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಸನಾತನ ಧರ್ಮದ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ, ಬೆಳೆಸುವುದು ಇಂದಿನ ಕಾಲದ ಅಗತ್ಯವಾಗಿದೆ. ನಮ್ಮ ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಗಳಲ್ಲ, ಅವುಗಳ ಹಿಂದೆ ಜೀವನಕ್ಕೆ ಮಾರ್ಗದರ್ಶನ ನೀಡುವ ಮೌಲ್ಯಗಳು, ಸಾಮಾಜಿಕ ಸಾಮರಸ್ಯದ ಸಂದೇಶಗಳು ಮತ್ತು ಮಾನವೀಯತೆಯ ಆಶಯಗಳು ಅಡಕವಾಗಿವೆ. ಇವುಗಳನ್ನು ಅರಿತು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಸಂಘಟಿತವಾಗಿ ಮಾಡಬೇಕಿದೆ ಎಂದರು.ಸನಾತನ ಸಂಸ್ಕೃತಿಯ ಉಳಿವು ಕೇವಲ ಒಂದು ವರ್ಗದ ಹೊಣೆಗಾರಿಕೆಯಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ಉತ್ತಮ ಮೌಲ್ಯಗಳನ್ನು ಪಾಲಿಸಿ, ಪರಸ್ಪರ ಗೌರವ ಮತ್ತು ಸಹಬಾಳ್ವೆಗೆ ಆದ್ಯತೆ ನೀಡಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ, ಮಹಿಳೆಯರ ಗೌರವವನ್ನು ಎತ್ತಿಹಿಡಿಯುವ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯಕ್ಕೆ ಪೂರಕವಾಗಬೇಕು. ಈ ಆಶಯದೊಂದಿಗೆ ಸಮಿತಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.ಮೋಹನ ಓಸ್ವಾಲ್‌, ಸತೀಶ ಓಸ್ವಾಲ್‌, ಶ್ರೀನಿವಾಸ ಇಲ್ಲೂರ, ವಾಸುದೇವ ಶಾಸ್ತ್ರೀ, ನಿಂಗರಾಜ ಮಹೇಂದ್ರಕರ, ಸಂಜಯ ಓಸ್ವಾಲ್‌, ವಿಜಯ ಬಡಿಗೇರ, ಮಾಣಿಕ ದಂಡಾವತಿ, ಚಂದ್ರು ಕಲಾಲ, ಪುಟ್ಟು ಕುಲಕರ್ಣಿ, ಸುರೇಶ ಕಲಾಲ, ಸುನೀಲ ಇಲ್ಲೂರ, ಆನಂದ ಪತ್ತಾರ, ವಿರುಪಾಕ್ಷೀ ಪತ್ತಾರ, ಸತೀಶ ಝಿಂಗಾಡೆ, ಪ್ರಕಾಶ ಪತ್ತಾರ, ಗುರು ಪತ್ತಾರ, ಸಹನಾ ಬಡಿಗೇರ, ಶೋಭಾ ಘಾಟಗೆ, ಸ್ನೇಹಾ ನಲವಡೆ, ಜ್ಯೋತಿ ಮಾಯಾಚಾರಿ, ಸೀಮಾ ದಂಡಾವತಿ, ಗೀತಾ ಶಿರವಾಳ, ಚಂದ್ರಶೇಖರ ಕಲಾಲ, ಯಶವಂತ ಕಲಾಲ, ಜ್ಯೋತಿ ಕಲಾಲ, ಸಹನಾ ಕಲಾಲ, ಮಧು ಕಲಾಲ, ಸರೀತಾ ಝಿಂಗಾಢೆ, ಭಾಗ್ಯಶ್ರಿ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.