ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು ಉನ್ನತ ಶಿಕ್ಷಣ ಪಡೆದು ಉದ್ಯೋಗ ಸೃಷ್ಟಿಸುವ ನವೋದ್ಯಮಿಗಳಾಗಬೇಕು ಎಂದು ಉದ್ಯಮಿ ರಚನಾ ಮಹೇಶ್ ಕಿವಿಮಾತು ಹೇಳಿದರು.ನಗರದ ಕಲಾಮಂದಿರದಲ್ಲಿ ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವವರ ಸಂಖ್ಯೆ ವಿರಳ. ಆದ್ದರಿಂದ ಮಹಿಳೆಯರು ತಮ್ಮಲ್ಲಿನ ಪ್ರತಿಭೆ ಮತ್ತು ಕೌಶಲ್ಯವನ್ನು ಮೆಟ್ಟಿಲಾಗಿ ಮಾಡಿಕೊಂಡು ಉನ್ನತ ಸ್ಥಾನಕ್ಕೇರಬೇಕು. ಸಾಧನೆಯ ಹಾದಿ ಬಹಳ ಕಠಿಣವಾಗಿರುತ್ತದೆ. ಆದ್ದರಿಂದ ಎದೆಗುಂದಬಾರದು ಎಂದರು.ಹೆಣ್ಣು ಮಕ್ಕಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಅಭಿವೃದ್ಧಿ ಹೊಂದಬೇಕು. ಆ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ನನ್ನ 19ನೇ ವಯಸ್ಸಿನಲ್ಲಿಯೇ ಎಡ್ಯೂಕೇರ್ ಸಂಸ್ಥೆಪಿಸಿ ನೂರಾರು ಮಂದಿಗೆ ಉದ್ಯೋಗ ನೀಡಿದಂತಾಯಿತು. ಈಗ ವಿಮೆನ್‌ಕ್ಯಾನ್ ಸಂಸ್ಥೆ ಸ್ಥಾಪಿಸಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮಹಿಳೆಯರ ಉನ್ನತಿಗೆ ಮತ್ತು ಸಾಧನೆಗೆ ಪೋಷಕರ ಪ್ರೋತ್ಸಾಹ ಬಹಳ ಮುಖ್ಯ ಎಂದರು.
ಸಮಾಜದಲ್ಲಿ ಎದುರಾಗುವ ಸವಾಲನ್ನು ಧೈರ್ಯದಿಂದ ಎದುರಿಸಲು ಶಾಲಾ- ಕಾಲೇಜಿನ ಪಠ್ಯೇತರ ಚಟುವಟಿಕೆ ನೆರವಾಗುತ್ತವೆ. ಆದ್ದರಿಂದ ಓದಿನ ಜತೆಗೆ ಎನ್.ಸಿ.ಸಿ, ಎನ್‌ಎಸ್‌ಎಸ್ ಸೇರಿದಂತೆ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ತೊಡಗಿಸಿಕೊಳ್ಳಬೇಕು. ಆದ್ದರಿಂದ ನಮ್ಮ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಅವರು ಹೇಳಿದರು.ವಿದ್ಯಾರ್ಥಿಗಳು ಪದವಿ ಓದುವಾಗಲೇ ಜೀವನದ ಗುರಿ ಏನೆಂದು ಸ್ಪಷ್ಟಪಡಿಸಿಕೊಳ್ಳಬೇಕು. ಪೋಷಕರು ಮಕ್ಕಳ ಮದುವೆಗೆ ಹಣ ಕೂಡಿಸಿಡುವುದೇ ಈ ಮೊದಲಿನ ಗುರಿಯಾಗಿತ್ತು. ಈಗ ಅವರನ್ನು ಸ್ವಾವಲಂಬಿಗಳಾಗಿಸಲು ಪ್ರೋತ್ಸಾಹ ನೀಡಬೇಕು. ಯೋಜನೆ ಅನುಸಾರ ಶ್ರಮ ವಹಿಸಿದರೆ ಸ್ಪರ್ಧಾ ಜಗತ್ತಿನಲ್ಲಿ ಗೆಲುವು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಒತ್ತಡವು ಖಿನ್ನತೆ ತಂದು ಬಿಡುತ್ತದೆ. ಅದನ್ನು ನಿವಾಸಿಕೊಳ್ಳಲು ಎಲ್ಲಾ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬದುಕು ಕಟ್ಟುವ ಜವಾಬ್ದಾರಿ ಹೆಣ್ಣಿಗೆ ಬರುತ್ತದೆ. ಅದನ್ನು ನಿಭಾಯಿಸಿಕೊಂಡು ಇಷ್ಟದ ಕ್ಷೇತ್ರದಲ್ಲಿ ಸಾಧನೆಯತ್ತ ಸಾಗಬೇಕು ಎಂದು ಅವರು ಕಿವಿಮಾತು ಹೇಳಿದರು.ಉಜ್ವಲ ವಾರ್ಷಿಕ ಸಂಚಿಕೆಯನ್ನು ಎಸ್.ಐ.ಆರ್.ಸಿ ಉಪಾಧ್ಯಕ್ಷ ರಘುವೀರ ಬಿಡುಗಡೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ವಿ.ಬಿ. ಲೋಕೇಶ, ವಿ. ಮೀರಾ, ಪಿ.ಎಂ. ಚಂದನಾ, ತೇಜಸ್ವಿನಿ ಇದ್ದರು.