ಸಾರಾಂಶ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಸುವರ್ಣ ಸಂಭ್ರಮ ವರ್ಷದ ಮೇ ತಿಂಗಳ ಕಾರ್ಯಕ್ರಮ ‘ಮಹಿಳಾ ಕಾನೂನು ಮಾಹಿತಿ ಕಾರ್ಯಕ್ರಮ’ ನಡೆಯಿತು. ಉಡುಪಿ ಜಿಲ್ಲಾ ಸರ್ಕಾರಿ ವಕೀಲರಾದ ಮೇರಿ ಎ.ಆರ್. ಶ್ರೇಷ್ಠ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಉದ್ಯಾವರ
ಸಂವಿಧಾನ ಮಹಿಳಾ ದೌರ್ಜನ್ಯದ ವಿರುದ್ಧ ಕಾನೂನುಗಳನ್ನು ರೂಪಿಸಿದೆ. ಆದರೆ ಆ ಕಾನೂನುಗಳ ಅರಿವಿಲ್ಲದೆ ಅಥವಾ ಅರಿವು ಇದ್ದರೂ ಕೂಡ ಅದನ್ನು ಬಳಸಿಕೊಳ್ಳುವ ಧೈರ್ಯವಿಲ್ಲದೆ ಮಹಿಳೆಯರು ದೌರ್ಜನ್ಯದಲ್ಲಿ ನಲುಗುತ್ತಿದ್ದಾರೆ. ಆದ್ದರಿಂದ ಮಹಿಳೆಯರು ತಮ್ಮ ಸಹಾಯಕ್ಕಿರುವ ಕಾನೂನುಗಳನ್ನು ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಧೈರ್ಯದಿಂದ ಬಳಸಬೇಕು. ಆಗ ಮಾತ್ರ ಸಮ ಸಮಾಜದ ನಿರ್ಮಾಣವಾಗಬಹುದು ಎಂದು ಉಡುಪಿ ಜಿಲ್ಲಾ ಸರ್ಕಾರಿ ವಕೀಲರಾದ ಮೇರಿ ಎ.ಆರ್. ಶ್ರೇಷ್ಠ ಹೇಳಿದರು.ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಸುವರ್ಣ ಸಂಭ್ರಮ ವರ್ಷದ ಮೇ ತಿಂಗಳ ಕಾರ್ಯಕ್ರಮ ‘ಮಹಿಳಾ ಕಾನೂನು ಮಾಹಿತಿ ಕಾರ್ಯಕ್ರಮ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೇಮಾ ಮಾರ್ಗರೇಟ್, ಸುಗಂಧಿ ಶೇಖರ್, ರಿಯಾಜ್ ಪಳ್ಳಿ ಮೊದಲಾದವರು ಭಾಗವಹಿಸಿದರು. ಪ್ರೇಕ್ಷಕರ ಎಲ್ಲ ಪ್ರಶ್ನೆಗಳಿಗೆ ಭಾಷಣಗಾರರು ಸೂಕ್ತ ಉತ್ತರವನ್ನು ನೀಡಿದರು.ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸಾಲಿಯನ್ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.