ವ್ಯಾಪಾರ ವಹಿವಾಟು ನಡೆಸಲು ಮಹಿಳೆಯರಿಗೆ ಉತ್ತೇಜನ ಬೇಕು

| Published : Mar 18 2025, 12:34 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ ಈ ರೀತಿಯ ಸ್ಟಾಲ್‌ಗಳನ್ನು ತೆರೆದು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅವರುಗಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು. ಮಾರಾಟ ಮೇಳಗಳು ಬೇರೆ ಬೇರೆ ಸ್ಥಳಗಳಲ್ಲೂ ತೆರೆದು ವ್ಯಾಪಾರ ವಹಿವಾಟು ನಡೆಸಲು ಮಹಿಳೆಯರಿಗೆ ಉತ್ತೇಜನ ನೀಡಬೇಕಿದೆ ಎಂದರು. ನಂತರ ಉತ್ಪನ್ನಗಳ ಗುಣ್ಣಮಟ್ಟದ ಬಗ್ಗೆ ಚರ್ಚಿಸಿ, ಹಲವು ಪದಾರ್ಥಗಳನ್ನು ಖರೀದಿಸಿ, ಶುಭಹಾರೈಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಗ್ರಾಮೀಣ ಪ್ರದೇಶದ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ ಈ ರೀತಿಯ ಸ್ಟಾಲ್‌ಗಳನ್ನು ತೆರೆದು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅವರುಗಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.

ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಕಾರದಲ್ಲಿ ಸಂಜೀವಿನಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ರೀತಿಯ ಮಾರಾಟ ಮೇಳಗಳು ಬೇರೆ ಬೇರೆ ಸ್ಥಳಗಳಲ್ಲೂ ತೆರೆದು ವ್ಯಾಪಾರ ವಹಿವಾಟು ನಡೆಸಲು ಮಹಿಳೆಯರಿಗೆ ಉತ್ತೇಜನ ನೀಡಬೇಕಿದೆ ಎಂದರು. ನಂತರ ಉತ್ಪನ್ನಗಳ ಗುಣ್ಣಮಟ್ಟದ ಬಗ್ಗೆ ಚರ್ಚಿಸಿ, ಹಲವು ಪದಾರ್ಥಗಳನ್ನು ಖರೀದಿಸಿ, ಶುಭಹಾರೈಸಿದರು.

ತಾ.ಪಂ. ಇಒ ಮುನಿರಾಜು ಮಾತನಾಡಿ, ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮೀಣ ಪ್ರದೇಶದ ಸ್ವಸಹಾಯ ಒಕ್ಕೂಟದ ಪದಾಧಿಕಾರಿಗಳು ಉತ್ಪಾದಿಸುವ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ಹಾಗೂ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳು ರಾಸಾಯನಿಕ ಬಳಸದೇ ತಯಾರು ಮಾಡಿರುವ ಉತ್ಪನ್ನಗಳು ಗ್ರಾಮೀಣ ಸೊಗಡಿನಿಂದ ಕೂಡಿದೆ. ಮಹಿಳೆಯರ ಸ್ವಾಭಿಮಾನದ ಬದುಕಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ೩ ದಿನಗಳು ನಡೆಯುವ ಈ ಮಾರಾಟ ಮೇಳದ ಉಪಯೋಗವನ್ನು ಪ್ರತಿಯೊಬ್ಬರು ಪಡೆದು ರೈತ ಮಹಿಳೆಯರ ಕಾರ್ಯದಲ್ಲಿ ಕೈಜೋಡಿಸಿ ಎಂದು ಕರೆಕೊಟ್ಟರು.

ತಾ.ಪಂ. ತಾಂತ್ರಿಕ ಅಧಿಕಾರಿ ಗೋಪಾಲ್ ಮಾತನಾಡಿದರು. ಜಿಲ್ಲೆಯ ಹಾಸನ, ಸಕಲೇಶಪುರ, ಆಲೂರು, ಬೇಲೂರು ಹಾಗೂ ಹೊ.ನ.ಪುರ ತಾಲೂಕಿನ ವಿವಿಧ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸ್ಟಾಲ್‌ಗಳನ್ನು ತೆರೆದಿದ್ದರು ಹಾಗೂ ವ್ಯಾಪಾರ-ವಹಿವಾಟು ಭರ್ಜರಿಯಾಗಿ ನಡೆಯಿತು ಜತೆಗೆ ಉತ್ಪನಗಳು ರುಚಿ ಹಾಗೂ ಶುಚಿಯಾಗಿ, ಜನರ ಪ್ರಶಂಸೆಗೆ ಪಾತ್ರರಾದರು.