ಮಹಿಳೆಯರ ಸಾಧನೆಗೆ ಮನ್ನಣೆ ಅಗತ್ಯ

| Published : Mar 25 2024, 12:52 AM IST

ಸಾರಾಂಶ

ದೊಡ್ಡಬಳ್ಳಾಪುರ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು, ಪೂರಕ ಉತ್ತೇಜನ ಅಗತ್ಯ. ಸಾಂಸ್ಕೃತಿಕ ವಲಯದಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಗಳಾಗಿವೆ ಎಂದು ತಜ್ಞ ವೈದ್ಯೆ ಡಾ.ಅರ್ಚನ ಹೇಳಿದರು.

ದೊಡ್ಡಬಳ್ಳಾಪುರ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು, ಪೂರಕ ಉತ್ತೇಜನ ಅಗತ್ಯ. ಸಾಂಸ್ಕೃತಿಕ ವಲಯದಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಗಳಾಗಿವೆ ಎಂದು ತಜ್ಞ ವೈದ್ಯೆ ಡಾ.ಅರ್ಚನ ಹೇಳಿದರು.

ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಅಭಿನೇತ್ರಿ ಸಾಂಸ್ಕೃತಿಕ ಸಂಘ, ಅಭಿನೇತ್ರಿ ಮಹಿಳಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ನೃತ್ಯ ಸಮಾಗಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸವಾಲುಗಳನ್ನು ಎದುರಿಸಿ ಸಮರ್ಪಕ ಅಸ್ತಿತ್ವವನ್ನು ಕಂಡುಕೊಳ್ಳುವ ಅವಶ್ಯಕತೆ ಹೆಚ್ಚಿದೆ. ಮಹಿಳೆಯರ ಸಾಧನೆಗೆ ಮನ್ನಣೆ ದೊರೆಯಬೇಕು ಎಂದರು.

ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್ ಮಾತನಾಡಿ, ಕಳೆದ 2 ದಶಕಗಳಿಂದ ಸಾಂಸ್ಕೃತಿಕವಾಗಿ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡುವ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಂಘದ ಮೂಲಕ ಹಲವು ಪ್ರತಿಭೆಗಳು ಅನಾವರಣಗೊಂಡಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿಭಾ ಪ್ರದರ್ಶನಗಳನ್ನು ನೀಡಿದ್ದಾರೆ. ಸಂಸ್ಕೃತಿ, ಶಿಕ್ಷಣ, ಮಹಿಳಾ ಸಬಲೀಕರಣ, ಸ್ವ-ಉದ್ಯೋಗ ಇತ್ಯಾದಿ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಉಪ ಅರಣ್ಯಸಂರಕ್ಷಣಾಧಿಕಾರಿ ಲಕ್ಷ್ಮೀ, ಸುರಭಿ ಭಜನಾ ಮಂಡಲಿಯ ಶೈಲಾ, ಲಯನ್ಸ್‌ ಕ್ಲಬ್‌ ನಿರ್ದೇಶಕಿ ರತ್ನಮ್ಮ, ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘದ ನಿರ್ದೇಶಕಿ ಲಕ್ಷ್ಮಿ, ಗುಜರಾತಿ ಮಹಿಳಾ ಸಂಘದ ಅಧ್ಯಕ್ಷೆ ದಮಯಂತಿ, ಲಕ್ಷ್ಮಯ್ಯ ಟ್ರಸ್ಟ್ ನಿರ್ದೇಶಕಿ ಅಪೂರ್ವ ಅರವಿಂದ್, ಅರೆಕಾಲಿಕ ಸ್ವಯಂ ಸೇವಕಿ ಶೋಭಾ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರಿಂದ ಕೋಲಾಟ, ಭರತನಾಟ್ಯ, ಯೋಗ, ವಿವಿಧ ಸಮೂಹ ನೃತ್ಯಗಳು, ಜಾನಪದ ನೃತ್ಯ ಹಾಗೂ ಗಾಯನ ಕಾರ್ಯಕ್ರಮಗಳು ನಡೆದವು.

24ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ಅಭಿನೇತ್ರಿ ಸಾಂಸ್ಕೃತಿಕ ಸಂಘದಿಂದ ಸಂಗೀತ ನೃತ್ಯ ಸಮಾಗಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.