ಸಾರಾಂಶ
ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹಿಂದೆ ಕೂರದೆ ಬ್ಯಾಂಕುಗಳ ಮೂಲಕ ಮತ್ತು ಎನ್‌ಆರ್‌ಎಲ್‌ಎಂ ಯೋಜನೆ ಮೂಲಕ ಸಾಲಸೌಲಭ್ಯ ಪಡೆದು ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲೀಕರಣವಾಗಬೇಕು. ಮಹಿಳೆಯರು ಕೇವಲ ಕೂಲಿಕಾರರಾಗದೆ ಮಾಲೀಕರಾಗುವ ಹಂತಕ್ಕೆ ಬೆಳೆಯಬೇಕು ಎಂದು ತಿಳಿಸಿದರು.ಮಹಿಳೆಯ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ನೇತೃತ್ವವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ವಹಿಸಿಕೊಂಡಿದ್ದು ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮಹಿಳೆಯರನ್ನು ಉದ್ದಿಮೆದಾರರನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಸಾಲಿನ ಬಜೆಟ್‌ನಲ್ಲಿ ಸುಮಾರು 500 ಅಕ್ಕ ಕೆಫೆಗಳನ್ನು ತೆರೆಯಬೇಕು. ಅದರಲ್ಲಿ ಮೊದಲ ಅಕ್ಕ ಕೆಫೆಯು ಬೆಂಗಳೂರಿನ ಪಂಚಾಯತ ರಾಜ್ ಆಯುಕ್ತಾಲಯದಲ್ಲಿ ಆರಂಭವಾದರೆ, ಎರಡನೆಯದ್ದು ಬೆಳಗಾವಿ ಜಿಪಂ ಆವರಣದಲ್ಲಿ ಆರಂಭವಾದ ಅಕ್ಕ ಕೆಫೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪ ಮಾತನಾಡಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಮುಂದೆ ಬರುತ್ತಿದ್ದಾರೆ. ಹತ್ತ-ಹಲವು ಸಾಧನ ಮಾಡಿ ಪುರುಷನಿಗಿಂತ ನಾನೇನೂ ಕಮ್ಮಿ ಇಲ್ಲ ಎಂದು ನಿರೂಪಿಸಿದ್ದಾಳೆ. ಇದು ನಾವೆಲ್ಲರೂ ಸಂತೋಷಪಡಬೇಕಾದ ವಿಷಯ ಎಂದು ತಿಳಿಸಿದರು.ಜಿಪಂ ಲೆಕ್ಕಾಧಿಕಾರಿ ಡಾ.ಗಂಗಾ ಹಿರೇಮಠ ಮಾತನಾಡಿ, ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಮಹಿಳೆಯರೇ ವಹಿಸಿಕೊಂಡು ಕಸ ವಿಲೇವಾರಿ ವಾಹನಗಳನ್ನು ಅವರೇ ಚಾಲನೆ ಮಾಡುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ನರೇಗಾ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಜಲ ಜೀವನ ಯೋಜನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸುಮಾರು 20 ಮಹಿಳೆಯರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸ್ತವಾಡ ಗ್ರಾಮದ ಘನ ತ್ಯಾಜ್ಯ ನಿರ್ವಹಣೆಯ ವಾಹನ ಚಾಲಕಿ ಕಾವೇರಿ ಬಸವರಾಜ್ ಪಾಟೀಲ, ಈ ಯೋಜನೆಯು ನಾವು ಆರ್ಥಿಕವಾಗಿ ಸದೃಢರಾಗಲು ಸಹಾಯಕವಾಗಿದೆ. ಹೀಗಾಗಿ ನಾನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸರ್ಕಾರಕ್ಕೆ ನನ್ನ ಕೃತಜ್ಞತೆ ತಿಳಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.ಈ ವೇಳೆ ಜಿಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಸಹಾಯಕ ನಿರ್ದೇಶಕಿ ಜಯಶ್ರೀ ನಂದೆಣ್ಣವರ, ಕಚೇರಿ ವ್ಯವಸ್ಥಾಪಕ ಬಸವರಾಜ್ ಮುರಘಾಮಠ, ಅಧೀಕ್ಷಕರಾದ ಸುಶೀಲಾ ವಣ್ಣೂರ, ಶಿಲ್ಪಾ ಚೌಗುಲಾ ಮತ್ತಿತರರು ಉಪಸ್ಥಿತರಿದ್ದರು.ಪ್ರಸ್ತುತ ನಮ್ಮ ಜಿಲ್ಲಾ ಪಂಚಾಯತಿಯಲ್ಲಿರುವ ಅಕ್ಕ ಕೆಫೆಯ ಊಟ, ತಿಂಡಿಗಳ ಬಗ್ಗೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ಬರುತ್ತಿದೆ. ಅಕ್ಕ ಕೆಫೆಯ ಯಶಸ್ಸನ್ನು ಅರಿತು ಮುಖ್ಯಮಂತ್ರಿ ಈ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿ ಮತ್ತು ತಾಪಂ ಆವರಣದಲ್ಲಿ ಅಕ್ಕ ಕೆಫೆಯನ್ನು ತೆರೆಯುವ ಕುರಿತು ಪ್ರಸ್ತಾಪಿಸಿದ್ದಾರೆ. ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಆ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು.-ರಾಹುಲ್ ಶಿಂಧೆ,
ಜಿಪಂ ಸಿಇಒ.