ಸಾರಾಂಶ
ಗ್ರಾಮೀಣ ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಸಂಘಟಿತರಾಗಿ, ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿರುವುದು ಮತ್ತು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹೊಂದಲು ಬ್ರಾಂಡಿಂಗ್, ಪ್ಯಾಕಿಂಗ್ ವ್ಯವಸ್ಥೆ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಗದಗ: ಗ್ರಾಮೀಣ ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಸಂಘಟಿತರಾಗಿ, ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿರುವುದು ಮತ್ತು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹೊಂದಲು ಬ್ರಾಂಡಿಂಗ್, ಪ್ಯಾಕಿಂಗ್ ವ್ಯವಸ್ಥೆ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು. ತಾಲೂಕಿನ ಚಿಕ್ಕ ನರಗುಂದ ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ ಮಹಿಳಾ ವರ್ಕಶೆಡ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಇಂದು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಿದ್ದು, ಸಮಾಜಕ್ಕೆ ತನ್ನದೇ ಆದ ಕೊಡುಗೆ ನಿಡುತ್ತಿದ್ದಾಳೆ. ಮಹಿಳೆ ವಿವಿಧ ಉತ್ಪನ್ನದಾಯಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದ್ದಾಳೆ ಎಂದರು. ಗದಗಿನ ಹಳ್ಳಿ ರುಚಿ ಎಂಬ ಬ್ರಾಂಡ್ ಅಡಿಯಲ್ಲಿ ಸುರಕೋಡ ಗ್ರಾಮದ ನಿಸರ್ಗ ಸ್ವ-ಸಹಾಯ ಗುಂಪಿನಿಂದ ಸಿದ್ಧಪಡಿಸಲಾದ ಶ್ಯಾವಿಗೆ ಉತ್ಪನ್ನಗಳನ್ನು ಅನಾವರಣಗೊಳಿಸಿದ ಶಾಸಕರು, ಗ್ರಾಮೀಣ ಮಹಿಳೆಯರ ಈ ಉತ್ಪನ್ನವನ್ನು ನನ್ನಿಂದ ಅನಾವರಣಗೊಳಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಅವರ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ, ಲಿಜ್ಜತ್ ಪಾಪಡ್ ಉತ್ಪನ್ನದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗದಗ ಜಿಲ್ಲೆಯ ಹಳ್ಳಿ ರುಚಿ ಉತ್ಪನ್ನಗಳೂ ಸಹ ಅಭಿವೃದ್ಧಿ ಹೊಂದಲಿ ಹಾಗೂ ಮುಂದಿನ ದಿನಗಳಲ್ಲಿ ಹಳ್ಳಿರುಚಿ ಉತ್ಪನ್ನಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಸದಸ್ಯರು, ಮಹಿಳೆಯರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಇದ್ದರು.