ಜಾನಪದ ಜೀವಂತಿಕೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು

| Published : Apr 08 2025, 12:32 AM IST

ಸಾರಾಂಶ

ಜಾನಪದ ಎಂದರೆ ಅದೊಂದು ಜ್ಞಾನ ಮತ್ತು ಜೀವನ. ಗ್ರಾಮೀಣ ಪ್ರತಿಭೆಯೇ ಜಾನಪದ ಉತ್ಸವ. ಅದರ ಸೊಗಡು ಬಹಳ ಶ್ರೇಷ್ಠವಾದದದ್ದು. ಕಲೆ ಮತ್ತು ಸಂಸ್ಕೃತಿಯನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕು. ಜಾನಪದದಲ್ಲಿ ತತ್ವ, ನೀತಿ ಮತ್ತು ಆದರ್ಶ ಇದೆ.

ಕೊಪ್ಪಳ:

ಜಾನಪದ ಸಂಸ್ಕೃತಿ ಶ್ರೀಮಂತ ಮತ್ತು ಜೀವಂತವಾಗಿರುವುದಕ್ಕೆ ಮಹಿಳೆಯರ ಪಾತ್ರ ದೊಡ್ಡದು ಎಂದು ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಭಿನ್ನಾಳ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಐಕ್ಯೂಎಸಿ ಮತ್ತು ಸಾಂಸ್ಕೃತಿಕ ಘಟಕದ ಸಹಯೋಗದಲ್ಲಿ ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ ಪರಿಕಲ್ಪನೆಯ ಜಾನಪದ ಉತ್ಸವ-2025 ಉದ್ಘಾಟಿಸಿ ಮಾತನಾಡಿದರು.

ಜಾನಪದ, ಒಗಟು, ಕಲೆ, ಸಂಸ್ಕೃತಿ, ಹಾಸ್ಯ, ಗೀಗಿ ಪದ ಮತ್ತು ಲಾವಣಿ ವೈಚಾರಿಕತೆ ಹೆಚ್ಚಿಸುತ್ತವೆ ಎಂದ ಅವರು, ಜಾನಪದ ಎಂದರೆ ಅದೊಂದು ಜ್ಞಾನ ಮತ್ತು ಜೀವನ. ಗ್ರಾಮೀಣ ಪ್ರತಿಭೆಯೇ ಜಾನಪದ ಉತ್ಸವ. ಅದರ ಸೊಗಡು ಬಹಳ ಶ್ರೇಷ್ಠವಾದದದ್ದು. ಕಲೆ ಮತ್ತು ಸಂಸ್ಕೃತಿಯನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕು. ಜಾನಪದದಲ್ಲಿ ತತ್ವ, ನೀತಿ ಮತ್ತು ಆದರ್ಶ ಇದೆ ಎಂದರು.

ಜಾನಪದ ಎನ್ನುವುದು ರಂಜನಿಯವಲ್ಲ. ಅದು ಜೀವನ, ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಜಾನಪದ ಮೂಲಕ ನಾವು ಸಮೃದ್ಧಿ ಜೀವನ ನಡೆಸಬೇಕು. ಮನುಷ್ಯನ ಬದುಕಿಗೆ ಬೇಕಾದ ತತ್ವ ಮತ್ತು ನೀತಿಗಳನ್ನು ನಮ್ಮ ಜಾನಪದ ಕಲಿಸಿಕೊಟ್ಟಿದೆ. ಅದಕ್ಕೆ ಜಾತಿ, ಧರ್ಮ, ಭೇದ-ಭಾವವಿಲ್ಲ. ಇದು ಎಲ್ಲರನ್ನು ಒಳಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಸಂಸ್ಕೃತಿ ಘಟಕದ ಸಂಚಾಲಕಿ ಡಾ. ಹುಲಿಗೆಮ್ಮ ಮಾತನಾಡಿ, ವೈಜ್ಞಾನಿಕವಾದ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಜತೆಗೆ ಸಂಪ್ರದಾಯ ಕಾಪಾಡಿಕೊಂಡು ಅದನ್ನು ಉಳಿಸಿ-ಬೆಳೆಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಗಣಪತಿ ಲಮಾಣಿ, ಪ್ರಾಚೀನ ಕಾಲದಲ್ಲಿ ಜನರು ತಮ್ಮ ಅನುಭವಗಳನ್ನು ಜಾನಪದ ಮೂಲಕ ವ್ಯಕ್ತಪಡಿಸುತ್ತಿದ್ದರು. ಕೈಗಾರಿಕೆ ಕ್ರಾಂತಿ ನಂತರ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಜನರು ವಲಸೆ ಬಂದರು. ಇದರಿಂದ ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ಜೀವನ ಅನಿವಾರ್ಯವಾಗಿ ಬದಲಾವಣೆ ಆಯಿತು. ಜಾನಪದ ಕಲಾವಿದರು ಅನಕ್ಷರಸ್ಥರಾದರು ಅವರು ಕಥೆ, ನಾಟಕ ಮತ್ತು ಹಾಡು ಹಾಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ಈರಮ್ಮ ಮುಧೋಳ ಮತ್ತು ಶಾಂತಮ್ಮ ಜಾನಪದ ಗೀತೆ ಹಾಡಿದರು. ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಜನವರಿ-ಫೆಬ್ರವರಿ ತಿಂಗಳ ಮಹಿಳಾ ಟೈಮ್ಸ್ ಪತ್ರಿಕೆ ಬಿಡುಗಡೆ ಮಾಡಲಾಯಿತು. ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಸುಮಿತ್ರಾ, ಶುಭ, ಸೌಮ್ಯ ಹಿರೇಮಠ, ಹನುಮಂತಪ್ಪ ಮೇಟಿ, ಶಿವಪ್ರಸಾದ ಹಾದಿಮನಿ, ಶ್ರೀಕಾಂತ ಸಿಂಗಾಪುರ, ಮಹೇಶ ಪೂಜಾರ, ಮಂಜಪ್ಪ ಕುರ್ಕಿ ಉಪಸ್ಥಿತರಿದ್ದರು.