ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸುಸ್ಥಿರ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ತಿಳಿಸಿದರು.ನಗರದ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಘಟಕದಿಂದ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಜನನದಿಂದಲೇ ಸಬಲಳು. ಮಹಿಳೆ ತನ್ನಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಾಧನೆಯ ಪಥದೆಡೆಗೆ ಸಾಗಬೇಕಾಗಿದೆ. ತನಗೆ ಸಬಲರಾಗಿ ಮಾಡಲು ಯಾರಾದರೂ ಬರುತ್ತಾರೆ ಎಂದು ಮಹಿಳೆ ಕಾಯಬಾರದು. ಕುಟುಂಬ, ಮಕ್ಕಳು, ಪತಿ ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಮತ್ತೆ ಹೊರಗಡೆ ಬಂದು ದುಡಿಯುವ ಮಹಿಳೆ ಅಸಾಮಾನ್ಯ ಶಕ್ತಿವುಳ್ಳವಳಾಗಿದ್ದಾಳೆ ಎಂದರು.
ಸರ್ಕಾರ ಕೂಡಾ ಮಹಿಳೆಯರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಮಹಿಳೆಯರ ಒಳಗೊಳ್ಳುವಿಕೆಯಿಂದ ಸುಸ್ಥಿರ ಸಮಾಜ ಮತ್ತು ಸಧೃಢವಾದ ದೇಶ ನಿರ್ಮಾಣ ಮಾಡಬಹುದು. ಮಹಿಳೆ ಒಂದು ವೇಳೆ ಈ ಸಮಾಜದಿಂದ ಬೇರ್ಪಡೆಯಾದರೆ ಆಕೆಯನ್ನು ಸೇರ್ಪಡೆ ಮಾಡಿಕೊಂಡು ಸೂಕ್ತ ಪ್ರೋತ್ಸಾಹ ಮತ್ತು ಧೈರ್ಯ ತುಂಬಿದರೆ ಏನನ್ನಾದರೂ ಸಾಧಿಸಬಹುದು ಎಂದು ತುಳಸಿಮಾಲಾ ಪ್ರತಿಪಾದಿಸಿದರು.ಕಾಲೇಜಿನ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ಮಹಿಳೆ ಇಂದು ಐಟಿ ಬಿಟಿ, ವಿಮಾನಯಾನ, ರೈಲ್ವೆ ಮತ್ತು ಇನ್ನಿತರ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಇಂದು ಪುರುಷರಿಗಿಂತ ಹೆಚ್ಚು ಮೇಲುಗೈ ಸಾಧಿಸುತ್ತಿದ್ದಾಳೆ. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಉದಾಹರಣೆಯಾಗಿದ್ದಾರೆ ಎಂದು ತಿಳಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ.ಮೂಲಿಮನಿ ಮಾತನಾಡಿ, ಮಹಿಳೆ ಎಂದರೆ ದೇವತಾ ಸ್ವರೂಪಿ. ತಾನೂ ಸಂಸ್ಕಾರದಿಂದ ಬದುಕುವುದರ ಜೊತೆಗೆ ತನ್ನ ಕುಟುಂಬವನ್ನು ಸಂಸ್ಕಾರದಿಂದ ಮುನ್ನಡೆಸುತ್ತಾಳೆ. ಮಹಿಳೆ ಶ್ರಮಜೀವಿ. ಪ್ರಯತ್ನಶೀಲ ಪ್ರತಿಭೆ ಆಕೆಯಲ್ಲಿದೆ. ಮಹಿಳೆಗೆ ಪ್ರೇರಣೆ ನೀಡಿ, ಒಂದು ಕಾರ್ಯದಲ್ಲಿ ಭಾಗವಹಿಸುವಂತೆ ಸ್ಫೂರ್ತಿ ನೀಡಿದರೆ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಿದ್ರಾಮ ಪಾರಾ, ನಿರ್ದೇಶಕ ರವಿ ಹಾಲಹಳ್ಳಿ, ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ, ಐಕ್ಯೂಎಸಿ ಸಂಯೋಜಕ ರಾಜಮೋಹನ, ಉಪ ಪ್ರಾಚಾರ್ಯ ಅನೀಲಕುಮಾರ ಚಿಕ್ಕಮಾಣೂರ ಉಪಸ್ಥಿತರಿದ್ದರು.
ಸಾಧನಾ ಚಿಮಕೊಡೆ ಸ್ವಾಗತಿಸಿದರು. ಶೃತಿ ಸ್ವಾಮಿ ನಿರೂಪಿಸಿದರೆ, ಗೀತಾ ರಾಗಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಪ್ರಾಸ್ತಾವಿಕವಾಗಿ ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಶ್ವೇತಾ ಪಾಟೀಲ ಮಾತನಾಡಿದರು. ರೇಣುಕಾ ಭಗವತಿ ವಂದಿಸಿದರು.ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಧ್ಯಾಪಕ ವೃಂದದವರಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.