ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರೂಡಿಸಿಕೊಳ್ಳಬೇಕು. ಮಹಿಳೆಯರು ತಮ್ಮ ವಿರುದ್ಧ ಅನ್ಯಾಯವಾದಾಗ ದನಿಯೆತ್ತಬೇಕು ಹಾಗೂ ಸಂಘಟಿತರಾಗಬೇಕು ಎಂದು ರೈತ ನಾಯಕಿ ಸುನಂದಾ ಜಯರಾಂ ಸಲಹೆ ನೀಡಿದರು.ಕರ್ನಾಟಕ ಸಂಘದ ಆವರಣದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ ಹಾಗೂ ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಎಚ್.ಆರ್.ಕನ್ನಿಕ ಅವರ ಬದುಕ ಶುಭದೊಸಗೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಮಾಜದಲ್ಲಿ ಶಕ್ತಿಯಾಗಿ ನಿಲ್ಲಬೇಕು. ಜಿಲ್ಲೆಗೆ ಅಂಟಿರುವ ಹೆಣ್ಣು ಭ್ರೂಣ ಹತ್ಯೆ ಕಳಂಕವನ್ನು ಹೋಗಲಾಡಿಸಲು ಎಲ್ಲರೂ ಕೈ ಜೋಡಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.ಮಹಿಳೆಯರಿಗೆ ನೀಡಲಾಗುತ್ತಿದ್ದ ವೇತನ ತಾರತಮ್ಯದ ಬಗ್ಗೆ ದನಿಯೆತ್ತಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಾರಂಭಿಸಲಾಯಿತು. ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ರಕ್ಷಣೆಯನ್ನು ಸಂವಿಧಾನ ನೀಡಿದೆ. ಮಹಿಳೆಯರು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಪ್ರತಿಯೊಂದು ಹಂತದಲ್ಲಿ ಮಹಿಳೆಯರು ನಿರ್ಭಯವಾಗಿ ಜೀವನ ನಡೆಸಬಹುದು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ಕೆಲಸ ಮಾಡುವ ಶಕ್ತಿ ಇದೆ. ಮನೆಯನ್ನೂ ನಿರ್ವಹಿಸುತ್ತಾಳೆ. ಹೊರಗೆ ಹೋಗಿ ಉದ್ಯೋಗ ಮಾಡುತ್ತಾಳೆ. ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶ ನೀಡುವ ಕೆಲಸಗಳು ವೇಗವಾಗಿ ನಡೆಯಬೇಕು ಎಂದರು.ಪಿ.ಇ.ಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಅವರು ಎಚ್.ಆರ್.ಕನ್ನಿಕ ರಚಿತ ಕೃತಿ ಬದುಕ ಶುಭದೊಸಗೆ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾವಯುವ ಕೃಷಿ- ಮಂಜುಳಾ, ಆಯುಷ್ ವೈದ್ಯೆ- ಡಾ.ಬಿ.ಎಸ್.ಸೀತಾಲಕ್ಷ್ಮಿ, ಸಾಹಿತ್ಯ- ಡಾ.ಎಸ್.ಪಿ.ಮಂಜುಳಾ, ವೈದ್ಯರು ಹಾಗೂ ಗಾಯಕರು- ಡಾ.ವರ್ಷಹೂಗಾರ್, ಸಾಮಾಜಿಕ ಹೋರಾಟ-ಸಿ.ಕುಮಾರಿ, ಶಿಕ್ಷಣ- ಎಂ.ಪಿ.ಸವಿತಾ, ಕಾನೂನು-ಎಲ್.ಉಮಾ, ಯೋಗ-ಎಸ್.ಜಿ.ವಿಜಯಾ, ಕ್ರೀಡೆ- ಎನ್.ಮಾಧುರಿ, ನೃತ್ಯ- ಎಂ.ಎಸ್. ಬಿಂದುರಾವ್, ಸಂಗೀತ- ಸೌಮ್ಯ ಶ್ರೀರಾಮ್, ಆರಕ್ಷಕ- ಜಯಶ್ರೀ, ಪ್ರಸಾಧನ- ಕೆ.ಎಸ್.ಶೋಭಾ, ಮಾಧ್ಯಮ-ಸೌಮ್ಯ, ರಂಗಭೂಮಿ-ಆರ್. ಮಹಾಲಕ್ಷ್ಮೀ, ಸಂಪನ್ಮೂಲ ವ್ಯಕ್ತಿ- ರಾಣಿ ಚಂದ್ರಶೇಖರ್, ಸಾರಿಗೆ- ಟಿ.ಎಂ.ಸೌಮ್ಯ, ಜನಪದ- ಭಾರತಿಕುಮಾರ್, ನಿರೂಪಣೆ- ಜಿ.ಎಸ್.ನಂದಿನಿ, ಶುಶ್ರೂಷಕಿ- ಎನ್.ಅನಿತಾ ಹಾಗೂ ಪೌರಕಾರ್ಮಿಕ - ಅಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣ ಉಪಯೋಜನಾ ಸಮನ್ವಯಾಧಿಕಾರಿ ಟಿ.ಲಕ್ಷ್ಮೀ, ವಾರ್ತಾಧಿಕಾರಿ ಎಸ್.ಹೆಚ್.ನಿರ್ಮಲಾ, ಕನ್ನಿಕಾ ಶಿಲ್ಪ ನವೋದಯ ಟ್ರಸ್ಟ್ ಉಪಾಧ್ಯಕ್ಷೆ ಎಲ್.ಕಮಲಾ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಜಿ.ಎಸ್.ಅನುಪಮ, ಮಂಗಲ ಜಿ.ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ಕಾರ್ಯದರ್ಶಿ ಕೆ.ಎಂ.ಕೃಷ್ಣೇಗೌಡ ಉಪಸ್ಥಿತರಿದ್ದರು.