ಪಪಂನಲ್ಲಿ ಯಾವುದೂ ಸರಿಯಿಲ್ಲ, ಸರ್ಕಾರಿ ವ್ಯವಸ್ಥೆ ಎಲ್ಲ ಹದಗೆಟ್ಟಿದೆ. ಯಾವ ಕೆಲಸವೂ ಸರಿಯಾಗಿ ಸಾಗುತ್ತಿಲ್ಲ ಎಂದು ಪಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಳಗುಂದ: ಪಟ್ಟಣದಲ್ಲಿ ನೀರು ತರಲು ಯಾವುದೇ ಬಾವಿ ಇಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎರಡು ದಿನಕ್ಕೊಮ್ಮೆ ಬರಬೇಕಾದ ನೀರು ಹದಿಮೂರು ದಿನ ಕಳೆದರೂ ಬರುತ್ತಿಲ್ಲ ಎಂದು ಪಟ್ಟಣದ ಸಂಗನಪೇಟಿ ಓಣಿಯ ಮಹಿಳೆಯರು ಹಲಗೆ ಬಡಿಯುತ್ತಾ ಗುರುವಾರ ಪಪಂಗೆ ಮುತ್ತಿಗೆ ಹಾಕಿ ನೀರು ಬಿಡುವಂತೆ ಒತ್ತಾಯಿಸಿದರು.
ಪಪಂನಲ್ಲಿ ಯಾವುದೂ ಸರಿಯಿಲ್ಲ, ಸರ್ಕಾರಿ ವ್ಯವಸ್ಥೆ ಎಲ್ಲ ಹದಗೆಟ್ಟಿದೆ. ಯಾವ ಕೆಲಸವೂ ಸರಿಯಾಗಿ ಸಾಗುತ್ತಿಲ್ಲ ಎಂದು ಪಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನೀರಿನ ಕೊರತೆ ಅಷ್ಟಾಗಿ ಇಲ್ಲ, ಸಿಬ್ಬಂದಿ ನೀರು ಸರಬರಾಜು ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಸಾರ್ವಜನಿಕರು ನೀರಿಲ್ಲದೇ ಪರದಾಡುವಂತಾಗಿದೆ. ಕಳೆದ ಕೆಲವು ತಿಂಗಳಿಂದ ನೀರು ಸರಬರಾಜು ಮಾಡುವ ಸಿಬ್ಬಂದಿ ಬೇಕಾಬಿಟ್ಟಿಯಾಗಿ ನೀರು ಪೂರೈಸುತ್ತಿದ್ದು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೊದಲು ಪ್ರತಿ ಎರಡು ದಿನಗಳಿಗೊಮ್ಮೆ ಬರುತ್ತಿದ್ದ ನೀರು ಈಗ ಪ್ರತಿ 5 ದಿನಗಳಿಗೊಮ್ಮೆ 1 ತಾಸು ಬಿಡುತ್ತಾರೆ. ಆದರೆ ಕಳೆದ ಹದಿಮೂರು ದಿನಗಳಿಂದ ನೀರು ಬಿಟ್ಟಿಲ್ಲ ಎಂದು ದೂರಿದರು.ಇಲ್ಲಿ ನೀರು ಬಂದಾಗ ಎಲ್ಲ ನಳಗಳಿಗೂ ಪ್ರತಿಯೊಬ್ಬರೂ ನೀರೆತ್ತುವ ಮಶಿನ್‌ಗಳಿಂದ ನೀರನ್ನು ಜಗ್ಗಿಸಿದರೂ ಪಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ಪಟ್ಟಣದಲ್ಲಿರುವ ಯಾವುದೇ ನಳಗಳಿಗೂ ಟ್ಯಾಪ್ ಅಳವಡಿಸಿಲ್ಲ. ಹೀಗಾಗಿ ನೀರು ಬಂದ ದಿನ ಮೊದಲ ನಲ್ಲಿಗಳಲ್ಲಿ ನೀರು ಬೇಕಾಬಿಟ್ಟಿಯಾಗಿ ಚರಂಡಿ ಪಾಲಾಗುತ್ತಿದೆ. ಮುಖ್ಯಾಧಿಕಾರಿ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರಲ್ಲದೆ, ಪಪಂ ನೀರಿನ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು.
ಈ ಬಗ್ಗೆ ಮುಖ್ಯಾಧಿಕಾರಿಗೆ ಹಲವಾರು ಬಾರಿ ಮೌಖಿಕವಾಗಿ ಹೇಳಿದರೂ ಪ್ರಯೋಜನವಾಗಿಲ್ಲ. ಇದು ಹೀಗೆಯೇ ಮುಂದುವರಿದರೆ ಸಾರ್ವಜನಿಕರು ಖಾಲಿ ಕೊಡಗಳ ಪ್ರದರ್ಶನ ನಡೆಸಿ, ಉಗ್ರ ಹೋರಾಟಕ್ಕಿಳಿಯಬೇಕಾದೀತು ಎಂದು ಎಚ್ಚರಿಸಿದರು.ಚರಂಡಿ ಸ್ವಚ್ಛಗೊಳಿಸಿಲ್ಲ: ಪಟ್ಟಣದಲ್ಲಿ ಮೂಲಭೂತ ಸಮಸ್ಯೆಗಳು ಎದ್ದು ಕಾಣುತ್ತವೆ. ಚರಂಡಿ ಸ್ವಚ್ಛಗೊಳಿಸುವುದು, ಕಸ ಗುಡಿಸುವುದು ಕಳೆದ ವರ್ಷವೇ ಮಾಡಿದ್ದು, ಇಂದಿಗೂ ಮತ್ತೆ ಚರಂಡಿ ಸ್ವಚ್ಛಗೊಳಿಸಲು ಬಂದಿಲ್ಲ. ಚರಂಡಿಗಳೆಲ್ಲ ತುಂಬಿ ಗಬ್ಬು ವಾಸನೆ ಹೊಡೆಯುತ್ತಿವೆ. ಪ್ರಮುಖ ರಸ್ತೆ ಹೊರತುಪಡಿಸಿ ಇತರ ಚರಂಡಿಗಳ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ ಎಂದರು.
ನಿಂಗಪ್ಪ ಹಾಳಕೇರಿ, ವಿರೂಪಾಕ್ಷಪ್ಪ ಹಾಳಕೇರಿ, ಸುರೇಶ ನೀಲಗುಂದ, ಈರಣ್ಣ ಕೆರಕನವರ, ರವಿ ಹಾಳಕೇರಿ, ಅನಿಲ ಕೆರಕನವರ, ಶಿವಪುತ್ರಪ್ಪ ಮೆಣಸಿನಕಾಯಿ, ವಿಷ್ಣು ಯಳವತ್ತಿ, ಅಕ್ಕಮ್ಮ ನೀಲಗುಂದ, ವಸಂತ ಗುಲಗಂಜಿ, ನಾಗರಾಜ ಯಳವತ್ತಿ, ಮಂಜುಳಾ ಕೆರಕನವರ, ರತ್ನವ್ವ ನೀಲಗುಂದ, ಲಕ್ಷ್ಮೀ ಗುಲಗಂಜಿ, ಶೈಲಾ ತೋಟದ, ಪುಷ್ಪಾ ನೀಲಗುಂದ, ಬಸವಣ್ಣೆಮ್ಮ ಕೇಲಗಾರ, ಲಕ್ಷ್ಮೀ ಯಳವತ್ತಿ ಇತರರು ಇದ್ದರು.