ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಾಧನೆ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಸಾಕ್ಷಿ: ನ್ಯಾ.ಯೋಗೇಶ್

| Published : Mar 12 2025, 12:52 AM IST

ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಾಧನೆ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಸಾಕ್ಷಿ: ನ್ಯಾ.ಯೋಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೌಕರಿ ಪಡೆಯುತ್ತಿದ್ದು, ಇಂದು ಪುರುಷರು ನಮಗೆ ಕೆಲಸದಲ್ಲಿ ಮೀಸಲಾತಿ ನೀಡಿ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸ್ತ್ರೀಯರ ಸ್ವಾತಂತ್ರ್ಯ ಎಂಬುದು ಈ ಹಿಂದೆ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇಂದು ಅದು ಕಾರ್ಯ ರೂಪದಲ್ಲಿದೆ ಎನ್ನುವುದಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿರುವುದೇ ಸಾಕ್ಷಿ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಯೋಗೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕುಟುಂಬ ನಿರ್ವಹಣೆಯ ಬದ್ಧತೆ ಇರುವುದು ಹೆಣ್ಣಿಗೆ ಮಾತ್ರ. ಯಾವುದೇ ಸಮಸ್ಯೆಗಳು ಬಂದರೆ ಅವುಗಳನ್ನು ತಾಳ್ಮೆ, ಸಹನೆ ಮತ್ತು ಸಂಯಮದಿಂದ ನಿಭಾಯಿಸುವ ವಿಶೇಷ ಕೌಶಲ ಮಹಿಳೆಯರಲ್ಲಿರುತ್ತದೆ ಎಂದರು.

ಅಮೆರಿಕಾದಲ್ಲಿ ಶೇ.100 ರಷ್ಟು ಸಾಕ್ಷರತೆ ಪ್ರಮಾಣವಿದ್ದರೂ ಕೂಡ ಇದುವರೆಗೂ ಒಬ್ಬ ಮಹಿಳಾ ಅಧ್ಯಕ್ಷರಾಗಿಲ್ಲ. ಅದರೆ, ನಮ್ಮ ದೇಶದಲ್ಲಿ ಅನಕ್ಷರಸ್ಥರ ಪ್ರಮಾಣವಿದ್ದರೂ ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ಸಿಕ್ಕಿದೆ. ನಮ್ಮ ದೇಶದ ರಾಷ್ಟ್ರಪತಿ ಕೂಡ ಮಹಿಳೆಯೇ ಆಗಿದ್ದಾರೆ ಎಂದರು.

ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ದೊರೆತಿದೆ. ಆದರೆ, ಮಹಿಳೆಯರು ಅಪರಾಧಗಳಲ್ಲಿಯೂ ಕೂಡ ಹೆಚ್ಚಾಗಿ ಪಾಲ್ಗೊಳ್ಳತ್ತಿರುವುದು ದುರದೃಷ್ಟಕರ. ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ಚಿನ್ನ ಸಾಗಾಟದಲ್ಲಿ ಮಹಿಳೆ ಪಾಲ್ಗೊಂಡಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಅಪರ ಸಿವಿಲ್ ನ್ಯಾಯಾಧೀಶ ಸಿದ್ದಾಪ್ಪಾಜಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಹತ್ತಾರು ಕಾನೂನುಗಳಿದ್ದರೂ ಕೂಡ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗಳು ನಿಂತಿಲ್ಲ. ಆದರೆ, ಹಲವಾರು ಬಗೆಯ ಶೋಷಣೆಗಳ ನಡುವೆಯೂ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರುಸಾಧನೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿ ನೋಡುತ್ತಿದ್ದೇವೆ. ಶಾಲೆ ಹಾಗೂ ಕಚೇರಿಗಳಲ್ಲಿಯೂ ಹೆಣ್ಣಿನ ಮೇಲೆ ಶೋಷಣೆಗಳು ನಡೆಯುತ್ತಿರುವುದು ನೋವು ತರುವ ಸಂಗತಿ. ಇಷ್ಟೆಲ್ಲಾ ಶೋಷಣೆಗಳ ನಡುವೆಯೂ ಹೆಣ್ಣು ಎದೆಗುಂದದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಅವರ ಧೃಢ ನಿರ್ಧಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಪ್ರತಿಯೊಬ್ಬ ಗಂಡಿನ ಸಾಧನೆಯ ಹಿಂದೆ ಒಬ್ಬ ಹೆಣ್ಣು ಇರುತ್ತಾರೆ. ನನ್ನ ತಂದೆ ಅವಿದ್ಯಾವಂತರಾಗಿದ್ದು, ನನ್ನ ತಾಯಿ 5ನೇ ತರಗತಿ ಮಾತ್ರ ಓದಿದ್ದರು. ನನ್ನ ತಾಯಿ ವಿದ್ಯೆಯಿಂದು ನಾನು ನ್ಯಾಯಾಧೀಶನಾಗಲು ಕಾರಣವಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೌಕರಿ ಪಡೆಯುತ್ತಿದ್ದು, ಇಂದು ಪುರುಷರು ನಮಗೆ ಕೆಲಸದಲ್ಲಿ ಮೀಸಲಾತಿ ನೀಡಿ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ ಎಂದರು.

ರಾಷ್ಟ್ರಪತಿಯಾದರೂ ಕೂಡ ಮನೆಯಲ್ಲಿ ಹೆಣ್ಣಿನ ಮಾತು ಕೇಳುವಂತಿದೆ. ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೆಣ್ಣಿಗೆ ಮಾತ್ರವಿದೆ. ಮಹಿಳೆಯರಿಗೆ ಗೌರಿ, ಯುಗಾದಿ ಹಬ್ಬಗಳಿಗಿಂತಲೂ ಮಹಿಳಾ ದಿನಾಚರಣೆ ಎಂಬುದು ಪ್ರಮುಖವಾಗಿದ್ದು ತಮ್ಮನ್ನು ತಾವು ಗೌರವಿಸಿ ಬೆನ್ನುತಟ್ಟಿಕೊಳ್ಳುವ ಹಬ್ಬವಾಗಿದೆ ಎಂದರು.

ನ್ಯಾಯಾಧೀಶರಾದ ಎಂ.ನರಸಿಂಹಮೂರ್ತಿ ಹಾಗೂ ಎಚ್.ಎಸ್.ಶಿವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲೆ ಹಾಗೂ ನ್ಯಾಯಾಲಯದ ಹಿರಿಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷ ಹಡೇನಹಳ್ಳಿ ಉಮೇಶ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಕು.ಅರುಣಾಬಾಯಿ, ಟಿ.ಆರ್.ಶ್ರೀದೇವಿ, ನ್ಯಾಯಾಧೀಶರ ಪತ್ನಿಯರಾದ ರಮ್ಯ, ನೇತ್ರಾವತಿ, ಪ್ರಮೀಳ, ವಕೀಲರಾದ ಎಸ್.ಎನ್.ಮಂಜುಳ, ಟಿ.ಕೆ.ರುಕ್ಮಿಣಿ, ರಾಜಮ್ಮ, ರಿಹಾನಾಬಾನು, ವಿಜಯಲಕ್ಷ್ಮಿ, ಮಮತ, ಕವನಶ್ರೀ ಎಸ್.ಕೆ.ಹೇಮ, ಶಮಿತ್‌ ತಾಜ್, ಬಿ.ಎನ್.ರಂಜಿತ, ಶಿರಸ್ತೆದಾರ್ ಮಂಜುಳ, ಅಸ್ಮತ್, ಕಾನೂನು ಸೇವಾ ಸಮಿತಿ ಸೋನುಮೂರ್ತಿ ಸೇರಿದಂತೆ ವಕೀಲರು ಇದ್ದರು.