ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿತ್ತು. ಕೂರಲು ಕುರ್ಚಿ ಇಲ್ಲದೇ, ಕುಡಿಯುಲು ನೀರಿಲ್ಲದೇ, ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ಐದು ತಾಲೂಕು ಸೇರಿದಂತೆ ಇತರೆಡೆಯಿಂದಲೂ ಬಸ್ ವ್ಯವಸ್ಥೆ ಕಲ್ಪಿಸಿ ಸುಮಾರು ೧೦ ಸಾವಿರಕ್ಕೂ ಅಧಿಕ ಮಹಿಳೆಯರನ್ನು ನಿರೀಕ್ಷೆಗೂ ಮೀರಿ ಕರೆ ತರಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳದ ಕಾರಣ ಅದ್ವಾನದ ಕಾರ್ಯಕ್ರಮ ಇದಾಗಿತ್ತು.
ಕುಡಿಯುವ ನೀರು, ಕುರ್ಚಿಗೂ ಪರದಾಟ:ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರು ಕೂರಲು ಕುರ್ಚಿಗಳು ಇಲ್ಲದೇ ಪರದಾಡಿದರು. ಸರಿಯಾದ ಕುರ್ಚಿಗಳ ವ್ಯವಸ್ಥೆ ಮಾಡದ ಕಾರಣ ಕೆಲವರು ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು. ಬಿಸಿಲ ಝಳಕ್ಕೆ ತತ್ತರಿಸಿದ ಮಹಿಳೆಯರು ಕುಡಿಯುವ ನೀರಿಗೂ ಪರಾದಾಡಿದ ದೃಶ್ಯಗಳು ಕಂಡುಬಂದಿತು. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಕೆಲ ಮಹಿಳೆಯರು ಮರದ ಆಶ್ರಯ ಪಡೆದುಕೊಂಡರೆ, ಕೆಲವು ತಮ್ಮ ಸೆರಗಿನಿಂದ ತಲೆಮುಚ್ಚಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯಲು ಪರದಾಡಿದರು.
ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡದ ಕಾರಣ ಊಟಕ್ಕಾಗಿ ಮಹಿಳೆಯರು ಪರದಾಡಿದರು. ಒಬ್ಬರ ಮೇಲೆ ಒಬ್ಬರು ನಿಂತು ಊಟ ಪಡೆದುಕೊಂಡು, ಧೂಳಿನಲ್ಲಿಯೇ ಊಟ ಸೇವಿಸಿದರು. ಬೆಳಗ್ಗೆ ೮ ಗಂಟೆಗೆಲ್ಲಾ ವಿವಿಧೆಡೆಗಳಿಂದ ಮಹಿಳೆಯರನ್ನು ಕರೆ ತರಲಾಗಿತ್ತು. ಜತೆಗೆ, ಮಿನಿ ವಿಧಾನಸೌಧದಿಂದ ಮೆರವಣಿಗೆಯಲ್ಲಿ ಸಾಗಿ ಬಂದರು. ಬೆರಳೆಣಿಕೆಯಷ್ಟು ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಿದ್ದರಿಂದ ಮಹಿಳೆಯರಿಗೆ ತುಂಬಾ ಸಮಸ್ಯೆಯಾಗಿತ್ತು.ಸೀರೆ ಆಸೆಗೆ ಮುಗಿ ಬಿದ್ದ ಮಹಿಳೆಯರು:
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಮಹಿಳೆಯರಿಗೆ ಸೀರಿ ಬಾಗಿನ ನೀಡಲಾಗುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರಚಾರ ಮಾಡಿದ್ದರು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಿದ್ದು ಬಂದಿದ್ದರು. ಕುಡಿಯುವ ಮಜ್ಜಿಗೆಗಾಗಿ ಮಹಿಳೆಯರ ನೂಕಾಟ, ತಳ್ಳಾಟಗಳೆ ಹೆಚ್ಚಾಗಿ ಆರೋಜಕರು ಮಜ್ಜಿಗೆ ಪಾಕೆಟ್‌ಗಳನ್ನು ಮಹಿಳೆಯರತ್ತ ತೂರಿದರು.ಟ್ರಾಫಿಕ್ ಜಾಮ್:
ಮಹಿಳೆಯರನ್ನು ಕರೆ ತಂದ ಬಸ್‌ಗಳನ್ನು ಹಳೆಯ ಬೆಂಗಳೂರು-ಮೈಸೂರು ಹೆದ್ದಾರಿ ಅಕ್ಕಪಕ್ಕದಲ್ಲಿ ಪಾರ್ಕ್ ಮಾಡಲಾಗಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಯಿತು. ಜತೆಗೆ, ಜಿಲ್ಲಾ ಕೇಂದ್ರದ ರಸ್ತೆಯನ್ನು ಒನ್ ವೇ ಮಾಡಿದ್ದ ಪರಿಣಾಮ ಸವಾರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತು.ಬಿಕೋ ಬಿಕೋ ವಸ್ತು ಪ್ರದರ್ಶನ:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕ್ರೀಡಾಂಗಣದ ಕೆಳ ಭಾಗದಲ್ಲಿ ಜಿಲ್ಲಾಡಳಿತ ಸರಸ್ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂಬಂಧ ೧೦೦ಕ್ಕೂ ಹೆಚ್ಚು ವಿವಿಧ ಇಲಾಖೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಸೇರಿದಂತೆ ಮಳಿಗೆ ತೆರೆಯಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಬಂದ ಯಾವ ಸಾರ್ವಜನಿಕರು ಮಳಿಗೆಯತ್ತ ಮುಖ ಮಾಡದ ಕಾರಣ ಬಿಕೋ ಎನ್ನುತ್ತಿತ್ತು.ಕಾರ್ಯಕ್ರಮ ಕಾಂಗ್ರೆಸ್‌ಮಯ:
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದರೂ ಇಡೀ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್‌ಮಯವಾಗಿತ್ತು. ಎಲ್ಲೆಡೆ ಕಾಂಗ್ರೆಸ್ ಕಟೌಟ್ ರಾರಾಜಿಸುತ್ತಿತ್ತು.ಕೈ ಮುರಿದು ಆಸ್ಪತ್ರೆಗೆ ದಾಖಲು
ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ೧ ಗಂಟೆ ತಡವಾಗಿ ಆರಂಭವಾಗಿತ್ತು. ವೇದಿಕೆ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಆಯೋಜಕರು ಮಹಿಳೆಯರಿಗೆ ಸೀರೆ ಹಂಚಲು ಮುಂದಾದರು. ಈ ವೇಳೆ ಮಹಿಳೆಯರು ಸೀರೆ ಪಡೆಯಲು ಮುಗಿಬಿದ್ದರು. ಇದರಿಂದಾಗಿ ಸೀರೆ ವಿತರಣಾ ಕೇಂದ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಯಿತು. ಒಂದು ಕ್ಷಣ ನೂಕು ನುಗ್ಗಲು ಏರ್ಪಟ್ಟಿತ್ತು. ಈ ವೇಳೆ ತಾಲೂಕಿನ ಶ್ಯಾನುಮಂಗಳ ಗ್ರಾಮದ ಮಹಿಳೆ ಸೀರೆ ಪಡೆಯುವ ವೇಳೆ ಉಂಟಾದ ನೂಕು ನುಗ್ಗುಲಿಂದ ಕೈ ಮೂಳೆ ಮುರಿದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೊಬ್ಬ ಮಹಿಳೆಗೂ ನೂಕು ನುಗ್ಗಲಿನಲ್ಲಿ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.ಮಗು ಮೃತಪಟ್ಟಿರುವ ಶಂಕೆ?
ಕಾರ್ಯಕ್ರಮದಲ್ಲಿ ಮಗು ಮೃತಪಟ್ಟಿರುವ ಶಂಕೆ ಇದೆ. ಸೀರೆ ಪಡೆಯುವ ವೇಳೆ ಮಹಿಳೆಯ ಕೈಯಿಂದ ಜಾರಿದ ಮಗು ಕೆಳಗೆ ಬಿದ್ದಿದ್ದು, ಮಗುವಿಗೆ ಗಂಭೀರ ಗಾಯವಾಗಿತ್ತು. ಹಾಗಾಗಿ ಮಗುವನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಈ ವೇಳೆ ಮಗು ಮೃತಪಟ್ಟಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಪೊಲೀಸ್ ಇಲಾಖೆಯಾಗಲಿ, ಅಥವಾ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ದೃಢಪಡಿಸಿಲ್ಲ.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ರಾಮನಗರ: ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)-ಸಂಜೀವಿನಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. ಹೆಣ್ಣು ಮಕ್ಕಳು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಿನಿ ವಿಧಾನಸೌಧದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಮಹಿಳೆಯರ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ೪೦೦ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಮತ್ತು ದ್ವಿತೀಯ ಪಿಯು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ರಾಮನಗರದ ಅಜಯ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಸಚಿವೆ ಮೋಟಮ್ಮ, ಜಯನಗರ ಕ್ಷೇತ್ರದ ಮಾಜಿ ಶಾಸಕಿ ಸೌಮ್ಯರೆಡ್ಡಿ, ಪದ್ಮಶ್ರೀ ಪುರಸ್ಕೃತ ಡಾ.ಅಕ್ಕಯ್ಯ ಪದ್ಮಶಾಲಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್, ನಗರಸಭೆ ಅಧ್ಯಕ್ಷ ಶೇಷಾದ್ರಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್ ಇತರರು ಉಪಸ್ಥಿತರಿದ್ದರು.