- ಜಿಲ್ಲಾಡಳಿತ ನೇತೃತ್ವದಲ್ಲಿ ಮಹಿಳಾ ದಿನ-2026 ಕಾರ್ಯಕ್ರಮ । ಜೀವನಶೈಲಿ ಬದಲಾವಣೆ ಮುಖ್ಯ: ಡಾ.ಸಮೃದ್ಧಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳಾ ಸಬಲೀಕರಣ ಕೇವಲ ಭಾಷಣ, ಅಂಕಿ ಅಂಶಗಳಿಗಷ್ಟೇ ಸೀಮಿತವಾಗದೇ, ಸಮಾಜದ ಕಟ್ಟಕಡೆಯ ಮಹಿಳೆಯರೂ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ಹೀಗೆ ಸ್ವತಂತ್ರರಾದಾಗ ಮಾತ್ರವೇ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಸರ್ಕಾರಿ ನೌಕರರ ಸಮುದಾಯ ‍ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ನಬಾರ್ಡ್‌ನಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಕೃತಿ ಸಹಜವಾಗಿಯೇ ಮಹಿಳೆಯರಲ್ಲಿ ಅಪ್ರತಿಮ ಶಕ್ತಿ, ತಾಳ್ಮೆ ಇರುತ್ತದೆ. ಮಹಿಳೆಯರು ಮೊದಲು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಎಚ್‌ಪಿವಿ ಲಸಿಕೆ ಪ್ರತಿಯೊಬ್ಬ ಪಾಲಕರೂ ತಪ್ಪದೇ ಕೊಡಿಸಬೇಕು. ಇದು ಮಹಿಳೆಯರ ಭವಿಷ್ಯದ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕ ಎಂದು ಹೇಳಿದರು.


ಸ್ವಸಹಾಯ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ನಬಾರ್ಡ್, ಬ್ಯಾಂಕುಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಪಡಿಸಿಕೊಂಡು ಮಹಿಳಾ ಉದ್ಯಮಿಗಳಾಗಿ ಹೊರಹೊಮ್ಮಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸುತ್ತಿರುವುದು ಸಂತೋಷದ ವಿಚಾರ. ಆದರೆ, ಉನ್ನತ ಶಿಕ್ಷಣದ ಹಂತದಲ್ಲಿ ಅವರು ಅರ್ಧಕ್ಕೆ ಶಿಕ್ಷಣ ಬಿಡದಂತೆ ಪಾಲಕರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದು ಐತಿಹಾಸಿಕ ಹೆಜ್ಜೆ. ಆಡಳಿತದ ವಿವಿಧ ಹಂತಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾನತೆಯ ಸಂಕೇತವಾಗಿದೆ. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ಪ್ರೋತ್ಸಾಹಿಸಿ, ಮೇಲೆತ್ತುವ ಕೆಲಸ ಮಾಡಬೇಕು. ನಾವು ಬಿತ್ತಿದ ಮೌಲ್ಯಗಳೇ ಮುಂದೆ ದೊಡ್ಡ ಮರವಾಗಿ ಸಮಾಜಕ್ಕೆ ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ವೈದ್ಯೆ ಡಾ.ಸಮೃದ್ಧಿ ಗಿತ್ತೆ ಮಾಧವ ಮಾತನಾಡಿ, ನಮ್ಮ ಜೀವನದಲ್ಲಿ ಜೀವನಶೈಲಿಯ ಬದಲಾವಣೆಗಳು ಅಗತ್ಯ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ, ಹಣ್ಣುಗಳನ್ನು, ಬೇಸಿಗೆಯಲ್ಲಿ ಮಾವು, ದ್ರಾಕ್ಷಿ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬೇಕು. ಆಹಾರದಲ್ಲಿ ದ್ವಿದಳ ಧಾನ್ಯಗಳು, ಮೊಟ್ಟೆ ಮತ್ತು ಸೋಯಾಬೀನ್ ಸೇರಿಸುವುದು ಒಳ್ಳೆಯದು ಎಂದು ಆರೋಗ್ಯ ರಕ್ಷಣೆ ಕುರಿತು ವಿವರಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಶಾಲಾ ಶಿಕ್ಷಣ ಇಲಾಖೆ ಡಯಟ್ ಉಪ ನಿರ್ದೇಶಕಿ ಗೀತಾ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಂ.ಎಸ್. ರಶ್ಮಿ ರೇಖಾ ಇತರರು ಇದ್ದರು. ಸಾಧಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

- - -

(ಬಾಕ್ಸ್‌) * ಸರ್ಕಾರಿ ಯೋಜನೆಗಳ ಸದ್ಬಳಕೆಗೆ ಮುಂದಾಗಿ: ಡಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಕುಟುಂಬದ ಆರೋಗ್ಯವು ಮಹಿಳೆಯರ ಕೈಯಲ್ಲಿದ್ದು, ತಮ್ಮ ವೈಯಕ್ತಿಕ ಅಭಿವೃದ್ಧಿ ಜೊತೆಗೆ ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕು. ಮಹಿಳೆಯರು ಕೇವಲ ಬ್ಯಾಂಕಿನಲ್ಲಿ ಹಣ ಉಳಿಸದೆ, ಅದನ್ನು ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿ ಉದ್ಯಮಶೀಲರಾಗಬೇಕು. 15 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ಕಡ್ಡಾಯವಾಗಿ ಕೊಡಿಸಿ. ಕಾಮಾಲೆ ರೋಗ ತಡೆಗೆ ಹೆಪಟೈಟಿಸ್ ಬಿ ಲಸಿಕೆಯ 2 ಡೋಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದು. ವಾರ್ಷಿಕ 400 ರು. ಕಂತು ಪಾವತಿಸುವ ಮೂಲಕ ಪಿಎಂ ಜೆಜೆಬಿವೈ ವಿಮೆ ಮಾಡಿಸಿಕೊಳ್ಳಬೇಕು. ಇದರಿಂದ ಅನಿರೀಕ್ಷಿತ ಘಟನೆ ಸಂಭವಿಸಿದಲ್ಲಿ ಕುಟುಂಬಕ್ಕೆ ₹4 ಲಕ್ಷವರೆಗೆ ಆರ್ಥಿಕ ನೆರವು ಸಿಗಲಿದೆ ಎಂದು ವಿವರಿಸಿದರು.

- - -

-7ಕೆಡಿವಿಜಿ7:

ದಾವಣಗೆರೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಾ.ಸಮೃದ್ಧಿ ಗಿತ್ತೆ ಮಾಧವ ಅವರನ್ನು ಸನ್ಮಾನಿಸಲಾಯಿತು.