ಸಾರಾಂಶ
ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವಲ್ಲಿ ಸಂಘ- ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಆರ್ಥಿಕವಾಗಿ ಮಹಿಳೆ ಸಬಲಳಾಗಲು ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ನಿರಂತರವಾಗಿ ಶ್ರಮಿಸುತ್ತಿದೆ.
ಹಗರಿಬೊಮ್ಮನಹಳ್ಳಿ: ಸರ್ಕಾರಗಳು ಎಂಎಸ್‌ಎಂಇಗಳ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ. ೫೦ರಷ್ಟು ಸಹಾಯಧನದೊಂದಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಸಂಘಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಅಕ್ಕಿ ಬಸವರಾಜ ತಿಳಿಸಿದರು.
ಪಟ್ಟಣದ ಹಗರಿ ಆಂಜನೇಯ ದೇವಸ್ಥಾನದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವಲ್ಲಿ ಸಂಘ- ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಆರ್ಥಿಕವಾಗಿ ಮಹಿಳೆ ಸಬಲಳಾಗಲು ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ೧.೯೫ ಲಕ್ಷ ಸ್ವಯಂಸೇವಾ ಸಂಘಗಳಿದ್ದು, ಸುಮಾರು ೨೪ ಲಕ್ಷ ಮಹಿಳಾ ಸದಸ್ಯರನ್ನು ಒಳಗೊಂಡಿವೆ. ಶೂನ್ಯ ಬಡ್ಡಿದರಲ್ಲಿ ಸಾಲವನ್ನು ಪಡೆದು ಚಿಕ್ಕ ಚಿಕ್ಕ ಉದ್ಯಮಗಳ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಎಸ್‌ಕೆಡಿಆರ್‌ಡಿಪಿ ಬಿ.ಸಿ. ಟ್ರಸ್ಟ್ ಮೂಲಕ ಮಹಿಳಾ ಆರೋಗ್ಯ, ವ್ಯಾಪಾರ ವಹಿವಾಟು, ಪಶು ಸಂಗೋಪನೆ, ಬಟ್ಟೆ ಅಂಗಡಿ, ರೊಟ್ಟಿ, ಚಿಪ್ಸ್, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಇಂತಹ ಅನೇಕ ಉದ್ಯಮಿಗಳನ್ನು ಸಂಘದ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಮಹಿಳೆಯರಲ್ಲಿ ಉಳಿತಾಯ ಮನೋಭಾವವನ್ನು ಬೆಳೆಸಿ, ಅದೇ ಹಣವನ್ನು ಕೃಷಿ ಇನ್ನಿತರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಯೋಜನೆಯ ಪ್ರಾದೇಶಿಕ ನಿರ್ದೇಶಕ ಗಣೇಶ ಬಿ. ಉದ್ಘಾಟಿಸಿ ಮಾತನಾಡಿ, ಸಂಘದ ೩೯ ಯೋಜನೆಗಳು ಅನುಷ್ಠಾನದಲ್ಲಿದ್ದು, ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರು ದುಡಿಮೆಯ ಜತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ವಾಣಿ, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬದಾಮಿ ನಟರಾಜ, ಮುಖಂಡ ಬಸವರಾಜ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಶಿಲ್ಪಕಲಾ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಮಹಿಳೆಯರಿಗೆ ಆರೋಗ್ಯ ವಿಮೆ ಚೆಕ್ ವಿತರಿಸಲಾಯಿತು. ಸಂಘದಿಂದ ಅನೇಕ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ಬಾಚಿಗೊಂಡನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ₹೨ ಲಕ್ಷ ದೇಣಿಗೆಯ ಡಿಡಿಯನ್ನು ವಿತರಿಸಲಾಯಿತು.ಮಹಿಳಾ ವಿಚಾರಗೋಷ್ಠಿಯಲ್ಲಿ ೪೫೦ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಸಂಘಗಳ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಜಿ.ಎಸ್. ಸುಮ, ಮಂಜುನಾಥ, ಮಂಜುಳಾ, ಸಿದ್ದೇಶ್ ಪೂಜಾರ್ ನಿರ್ವಹಿಸಿದರು.