ಸಾರಾಂಶ
- ಜ. 10ರಂದು ಲೀಗ್ ಹಂತದ ಪಂದ್ಯಗಳು- ಸಮರ್ಥನಂ ಸಂಸ್ಥೆಯ ಕ್ರೀಡಾ ಮುಖ್ಯಸ್ಥ ಧೀರಜ್
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಇಲ್ಲಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಇಂಡಸ್ಇಂಡ್ ಬ್ಯಾಂಕ್ ಬೆಂಬಲದೊಂದಿಗೆ ಮಹಿಳಾ ರಾಷ್ಟ್ರೀಯ ಅಂಧರ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಜ. 8ರಿಂದ ಮಹಾನಗರದ ವಿವಿಧ ಮೈದಾನಗಳಲ್ಲಿ ಏರ್ಪಡಿಸಲಾಗಿದೆ ಎಂದು ಸಮರ್ಥನಂ ಕ್ರೀಡಾ ವಿಭಾಗದ ಮುಖ್ಯಸ್ಥ ಧೀರಜ್ ತಿಳಿಸಿದರು.ಅವರು ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ (ಸಿಎಬಿಐ) ಸಹಯೋಗ ನೀಡಿವೆ. ಒಟ್ಟು 16 ತಂಡಗಳು ಆಗಮಿಸಲಿದ್ದು, ನಾಲ್ಕು ಗುಂಪುಗಳಾಗಿ ವಿಂಗಡಿಸಿ ಹುಬ್ಬಳ್ಳಿಯ ಜಿಮಖಾನಾ ಮೈದಾನ, ರೈಲ್ವೆ, ಬಿಡಿಕೆ ಕ್ರಿಕೆಟ್ ಮೈದಾನ ಹಾಗೂ ಧಾರವಾಡದ ಎಸ್ಡಿಎಂ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದರು.
ಜ. 7ರಂದು ಸಂಜೆ 5ಕ್ಕೆ ನಗರದ ಇಂದಿರಾ ಗಾಜಿನ ಮನೆಯಲ್ಲಿ ಕ್ರೀಡಾಕೂಟಕ್ಕೆ ಜನಪ್ರತಿನಿಧಿಗಳು, ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಗುತ್ತದೆ. ಒಟ್ಟು 24 ಲೀಗ್ ಪಂದ್ಯಗಳು ನಡೆಯಲಿವೆ.ಲೀಗ್ ಹಂತವು ಜ. 10ರಂದು ಕೊನೆಗೊಳ್ಳಲಿದ್ದು, ಸೆಮಿಫೈನಲ್ ಅರ್ಹತೆ ಪಡೆಯುವ ನಾಲ್ಕು ತಂಡಗಳು ಜ.11ರಂದು ಅಗ್ರಸ್ಥಾನಕ್ಕಾಗಿ ಸೆಣಸಾಡಲಿವೆ. ಜ.12ರಂದು ವಿವೇಕಾನಂದ ಜಯಂತಿಯಂದು ಆಚರಿಸಲಾಗುವ ರಾಷ್ಟ್ರೀಯ ಯುವ ದಿನದಂದು ಫೈನಲ್ ಪಂದ್ಯಗಳು ಹುಬ್ಬಳ್ಳಿಯ ಜಿಮ್‌ಖಾನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ ಎಂದರು.
ಸಿಎಬಿಐ ಸಂಸ್ಥಾಪಕ ಸದಸ್ಯ ಉದಯಕುಮಾರ ಬಾಗುನವರ ಮಾತನಾಡಿ, 2012ರಲ್ಲಿ ನಗರದಲ್ಲಿ ಇಂತಹ ಕ್ರೀಡಾಕೂಟ ನಡೆದಿತ್ತು. ಇದೀಗ 4ನೇ ಆವೃತ್ತಿಯ ಮಹಿಳಾ ಕ್ರಿಕೆಟ್ ಪಂದ್ಯವನ್ನು ನಗರದಲ್ಲಿ ಏರ್ಪಡಿಸಲಾಗುತ್ತಿದೆ. ಕರ್ನಾಟಕ, ಜಾರ್ಖಂಡ್, ಓಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಚಂಡೀಗಡ್, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯದ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದರು.ಒಟ್ಟು ಎ, ಬಿ, ಸಿ, ಡಿ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗುಂಪು-ಎ ವಿಭಾಗದಲ್ಲಿ ಓಡಿಶಾ, ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಗುಂಪು-ಬಿ ಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ, ಆಸ್ಸಾಂ, ಗಂಪು-ಸಿ ಯಲ್ಲಿ ದೆಹಲಿ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಗುಂಪು- ಡಿನಲ್ಲಿ ಆಂಧ್ರಪ್ರದೇಶ, ರಾಜಸ್ಥಾನ, ಚಂಡೀಗಡ್, ಹರಿಯಾಣ ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಸಿಎಬಿಐ ಸದಸ್ಯ ಶಿವರಾಮ ದೇಶಪಾಂಡೆ, ಮಹಿಳಾ ಅಂಧರ ಕ್ರಿಕೆಟ್ ನಡೆಯುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಸಂಸ್ಥೆಯಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದರು.ಈ ವೇಳೆ ಡಾ. ಸಂಜಯ, ಲೇಡಿಸ್ ಕ್ಲಬ್ನ ಅನೂಲಿ ವೆರ್ಣೇಕರ, ಕೃಷ್ಣ ಲಮಾಣಿ ಸೇರಿದಂತೆ ಹಲವರಿದ್ದರು.