ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕು ಕೃಷಿ ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿತ್ತು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯಲ್ಲಿ ಬಿತ್ತನೆಯಿಂದ ಧಾನ್ಯ ಸಂಗ್ರಹಣೆವರೆಗೂ ರೈತ ಮಹಿಳೆಯರ ಪಾತ್ರವೇ ಹೆಚ್ಚಾಗಿದ್ದು, ರೈತ ಮಹಿಳೆಯರು ಕೃಷಿಯಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ಸ್ಮರಿಸುವ ಸಲುವಾಗಿ ಇಂದು ಮಹಿಳಾ ಕಿಸಾನ್ ದಿವಸ್ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಮಂತರಾಯ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರವೇ ಹೆಚ್ಚಿದ್ದು ರೈತ ಮಹಿಳೆಯರು ಮೌಲ್ಯವರ್ಧನೆ ಮೂಲಕ ಸಣ್ಣ ಸಣ್ಣ ಉದ್ಯಮಗಳಿಂದ ಕೃಷಿ ಉದ್ಯಮಿಗಳಾಗಿ ತೊಡಗಿಕೊಳ್ಳಬಹುದು ಎಂದು ತಿಳಿಸಿದರು.
ಗೃಹ ವಿಜ್ಞಾನಿ ಮೇಘನಾ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಿಂದ ದೊರೆಯುವ ತಾಂತ್ರಿಕ ಮಾಹಿತಿ ಹಾಗೂ ಇಲಾಖೆಗಳಿಂದ ಪಿಎಂಎಫ್‌ಎಂಇ ಯೋಜನೆಯಡಿ ಧನಸಹಾಯ ಪಡೆದು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟ ಮಾಡುವುದರ ಮೂಲಕ ಆರ್ಥಿಕವಾಗಿ ಸಬಲರಾಗಬಹುದೆಂದು ತಿಳಿಸಿದರು.ಪಿಎಂಎಫ್‌ಎಂಇ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ್ ಮಾತನಾಡಿ, ಈ ಯೋಜನೆಯಡಿ ದೊರಕುವ ಸೌಲಭ್ಯಗಳ ಹಾಗೂ ಬ್ಯಾಂಕ್‌ನಿಂದ ದೊರಕುವ ಧನಸಹಾಯ ಕುರಿತು ಸಂಪೂರ್ಣ ಮಾಹಿತಿ ನೀಡಿ ರೈತ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಬೆಂಗಳೂರು ಜಿಲ್ಲೆಯ ಉಪ ಕೃಷಿ ನಿರ್ದೇಶಕರಾದ ಗಾಯತ್ರಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದು ರೈತ ಮಹಿಳೆಯರು ಸ್ವಸಹಾಯ ಸಂಘಗಳ ಮುಖಾಂತರ ಹಾಗು ವೈಯಕ್ತಿಕವಾಗಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿಕೊಂಡು ಸಮಗ್ರ ಕೃಷಿ ಪದ್ಧತಿ ಮತ್ತು ಕೃಷಿ ಉದ್ಯಮಗಳಿಂದ ಹೆಚ್ಚಿನ ಲಾಭ ಪಡೆಯಬಹುದೆಂದು ತಿಳಿಸಿದರು.ಇವೇ ವೇಳೆ ಪ್ರಗತಿ ಪರ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ಕೃಷಿ ನಿರ್ದೇಶಕರಾದ ಗಾಯತ್ರಿ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಪಿ, ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿಯ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಬಿ.ಜಿ.ಹನುಮಂತರಾಯ, ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಮೇಘನ, ಎಸ್.ವಿ, ಪ್ರಗತಿ ಪರ ರೈತರು, ಗ್ರಾಮದ ರೈತರು, ರೈತ ಮಹಿಳೆಯರು, ಕೃಷಿ ಸಖಿಯರು, ಕೃಷಿ ಅಧಿಕಾರಿಗಳು ಹಾಗೂ ಆತ್ಮ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
16ಕೆಡಿಬಿಪಿ3-ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಕಿಸಾನ್ ಗೋಷ್ಠಿ ಕಾರ್ಯಕ್ರಮ ನಡೆಯಿತು.
16ಕೆಡಿಬಿಪಿ4-ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಮಹಿಳಾ ಕಿಸಾನ್ ದಿವಸ್ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.