ಮಹಿಳೆಯರಲ್ಲಿ ದೈಹಿಕ ಕ್ಷಮತೆ ಹೆಚ್ಚಿಸುವುದು, ಆರೋಗ್ಯಕರ ಜೀವನ ಶೈಲಿಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಹಿಳೆಯರಲ್ಲಿ ದೈಹಿಕ ಕ್ಷಮತೆ ಹೆಚ್ಚಿಸುವುದು, ಆರೋಗ್ಯಕರ ಜೀವನ ಶೈಲಿಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮನುಜಶ್ರೀ ತಿಳಿಸಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ವಿಶೇಷ ಕ್ರೀಡಾ ಸ್ಪರ್ಧೆಗಳಿಗೆ ಶಾಸಕರ ರಮೇಶ್ ಬಂಡಿಸಿದ್ದೇಗೌಡರ ಪತ್ನಿ ಸುಮತಿ ಜೊತೆಗೂಡಿ ಚಾಲನೆ ನೀಡಿ ಮಾತನಾಡಿದರು.
ಈ ಕ್ರೀಡಾಕೂಟವು ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಲು ಹಾಗೂ ಪರಸ್ಪರ ಸೌಹಾರ್ದ ಮತ್ತು ಸ್ನೇಹಭಾವ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಎಂದರು.ಮುಸಿಕಲ್ ಚೇರ್, ಬಿಂದಿಗೆ ಹೊತ್ತು ಓಡುವುದು ಹಾಗೂ ಮಡಕೆ ಒಡೆಯುವ ಸ್ಪರ್ಧೆಗಳು ಮಹಿಳೆಯರ ಗಮನ ಸೆಳೆದವು. ವಿವಿಧ ವಯೋಮಾನದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾಸ್ಫೂರ್ತಿ, ಚುರುಕುತನ ಹಾಗೂ ಪ್ರತಿಭೆ ಪ್ರದರ್ಶಿಸಿದರು. ಸ್ಪರ್ಧಾರ್ಥಿಗಳ ಉತ್ಸಾಹ ಮತ್ತು ಸಂಭ್ರಮ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕ್ರೀಡಾಕೂಟದಲ್ಲಿ 20 ವರ್ಷದೊಳಗಿನ, 21ರಿಂದ 50 ವರ್ಷದೊಳಗಿನವರು ಹಾಗೂ 50 ವರ್ಷ ಮೇಲ್ಪಟ್ಟವರು ಹೀಗೆ ಮೂರು ವಯೋವರ್ಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ವಿಭಾಗದಲ್ಲಿಯೂ ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳಲ್ಲಿ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಶಾಸಕರ ಪತ್ನಿ ಸುಮತಿ ಖುದ್ದು ಮಹಿಳಾ ಸ್ಪರ್ಧಿಗಳೊಂದಿಗೆ ಭಾಗಿಯಾಗಿ ವೃತ್ತದ ಸುತ್ತಲು ಓಡಿ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ತಹಸೀಲ್ದಾರ್ ಚೇತನಾ ಯಾದವ್ ಹಾಗೂ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಸಂಕ್ರಾತಿ ಮಂಜುರಾಮ್ ಜೊತೆಯಾದರು.
ಈ ವೇಳೆ ಕಾರ್ಯನಿರ್ವಾಹಕಾಧಿಕಾರಿ ಚಂದ್ರು, ಅಚೀವರ್ಸ್ ಅಕಾಡೆಮಿಯ ಡಾ.ರಾಘವೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧ್ಯಕ್ಷ ನಾಗಭೂಷಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.