ಪಾದಚಾರಿ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

| Published : Jan 31 2025, 12:46 AM IST

ಪಾದಚಾರಿ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು, ಕನಕಪುರ, ಹಲಗೂರು, ಮಳವಳ್ಳಿ ಮೂಲಕ ಕೊಳ್ಳೇಗಾಲ, ಕೇರಳ, ತಮಿಳುನಾಡು ಸಂಪರ್ಕಿಸಲು ನಿರ್ಮಿಸಿರುವ 209 ರಾಷ್ಟ್ರೀಯ ಹೆದ್ದಾರಿಯ ಹಲಗೂರು ಮುತ್ತತ್ತಿ ರಸ್ತೆ, ಗೊಲ್ಲರಹಳ್ಳಿ ಬಳಿ ಹೆದ್ದಾರಿಯಲ್ಲಿ ಪ್ರಯಾಣಿಸುವ ವೇಳೆ ಈಗಾಗಲೇ 125ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ 18ಕ್ಕೂ ಹೆಚ್ಚು ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಇದಕ್ಕೆ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಹಲಗೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಕೂಡಲೇ ಪಾದಚಾರಿ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿ ಗೊಲ್ಲರಹಳ್ಳಿ, ಬ್ಯಾಡರಹಳ್ಳಿ ಮಹಿಳೆಯರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಕಚೇರಿ ಎದುರು ಆಗಮಿಸಿದ ಗ್ರಾಮಸ್ಥರು, ಮಹಿಳೆಯರು ತಾಲೂಕಿನ ಮುತ್ತತ್ತಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಗೊಲ್ಲರಹಳ್ಳಿ ಹಾಗೂ ಬ್ಯಾಡರಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚಾಗಿ ಸಾವು, ನೋವು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು ಮಾತನಾಡಿ, ಬೆಂಗಳೂರು, ಕನಕಪುರ, ಹಲಗೂರು, ಮಳವಳ್ಳಿ ಮೂಲಕ ಕೊಳ್ಳೇಗಾಲ, ಕೇರಳ, ತಮಿಳುನಾಡು ಸಂಪರ್ಕಿಸಲು ನಿರ್ಮಿಸಿರುವ 209 ರಾಷ್ಟ್ರೀಯ ಹೆದ್ದಾರಿಯ ಹಲಗೂರು ಮುತ್ತತ್ತಿ ರಸ್ತೆ, ಗೊಲ್ಲರಹಳ್ಳಿ ಬಳಿ ಹೆದ್ದಾರಿಯಲ್ಲಿ ಪ್ರಯಾಣಿಸುವ ವೇಳೆ ಈಗಾಗಲೇ 125ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ 18ಕ್ಕೂ ಹೆಚ್ಚು ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಇದಕ್ಕೆ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ 2 ತಿಂಗಳೊಳಗೆ ಅಂಡರ್‌ಪಾಸ್ ನಿರ್ಮಿಸಬೇಕು. ಅಲ್ಲಿಯವರೆಗೆ ರಕ್ಷಣಾ ಗಾರ್ಡ್ ಗಳನ್ನು ಅಳವಡಿಸಬೇಕು. ಹೆದ್ದಾರಿಗಳಲ್ಲಿ ಹೆಚ್ಚು ಜನ ಸಂಚಾರವಿರುವ ಕಡೆಗಳನ್ನು ಅಧ್ಯಯನ ಮಾಡಿ ತುರ್ತಾಗಿ ಅಪಘಾತಗಳನ್ನು ತಡೆಯುವ ಪರಿಹಾರ ಕೈಗೊಳ್ಳಬೇಕುಯ 10 ಕಿ.ಮೀಗೆ ಒಂದು ಕಡೆ ಕಣ್ಗಾವಲು ಘಟಕ, ಕಳಪೆ ಕಾಮಗಾರಿ ತೆರವು ಮಾಡಿ ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜಿಲ್ಲಾ ಸಹಕಾರ್ಯದರ್ಶಿ ಟಿ.ಎಚ್ ಆನಂದ್, ಗೊಲ್ಲರಹಳ್ಳಿ ಲಕ್ಷ್ಮಿ, ಶ್ವೇತಾ, ಮಂಜುಳಮ್ಮ, ಪುಟ್ಟತಾಯಮ್ಮ, ಮಹದೇವಮ್ಮ, ಸುಶೀಲಮ್ಮ ಸೇರಿದಂತೆ ಇತರರು ಇದ್ದರು.