ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಅಲ್ಲಿ ನಡೆದದ್ದು ಕೇವಲ ಕಾರ್ಯಕ್ರಮವಾಗಿರಲಿಲ್ಲ, ಸೇರಿದ್ದ ಎಲ್ಲ ಮಹಿಳೆಯರಲ್ಲೂ ಸಾಮಾಜಿಕ ಪರಿವರ್ತನೆಯ ಸಂಕಲ್ಪವಿತ್ತು ನಾಳೆ ಎನ್ನುವುದು ಸುಂದರವಾಗಿರಲಿ ಎನ್ನುವ ಆಶಯವಿತ್ತು. ಹೌದು ಈ ದೃಶ್ಯ ಕಂಡು ಬಂದದ್ದು ಬಿ.ಸಿ.ರೋಡಿನ ಸ್ತ್ರೀಶಕ್ತಿ ಸಭಾಭವನದಲ್ಲಿ.ಜನ ಶಿಕ್ಷಣ ಟ್ರಸ್ಟ್ , ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್, ಸಂಜೀವಿನಿ ಒಕ್ಕೂಟ, ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಮುದಾಯದತ್ತ ಸಾಂತ್ವನ ಕಾರ್ಯಕ್ರಮ ಕಸಮುಕ್ತ, ನಶೆಮುಕ್ತ, ಹಿಂಸಾಮುಕ್ತ ಮಾದರಿ ಗ್ರಾಮ, ಸ್ವಚ್ಛ ಮನೆ ಸ್ವಯಂ ಘೋಷಣೆಯ ಜೊತೆಗೆ ಅರ್ಥಪೂರ್ಣ ಸಂವಾದ - ಸಂಕಲ್ಪ ಕಾರ್ಯಕ್ರಮವಾಗಿ ಮೂಡಿಬಂತು.ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ರವರು ಸಂವಾದವನ್ನು ನಡೆಸಿಕೊಡುತ್ತಾ, ಮಾದರಿ ಗ್ರಾಮ ನಿರ್ಮಾಣಕ್ಕೆ ಇರುವ ಸಾಮಾಜಿಕ ತೊಡಕುಗಳ ಬಗ್ಗೆ ವಿವರಿಸುತ್ತಾ, ಆಗಬೇಕಿರುವ ಬದಲಾವಣೆ, ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಉಲ್ಲೇಖಿಸಿದರು. ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ರವರು ಸ್ವಚ್ಛ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣೆ ಪತ್ರ ಪುಸ್ತಕ ಬಿಡುಗಡೆ ಮಾಡಿದರು. ಬಂಟ್ವಾಳ ತಾಲುಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್, ತಾಲೂಕು ಸಂಜೀವಿನಿ ಒಕ್ಕೂಟಗಳ ವ್ಯವಸ್ಥಾಪಕರಾದ ಸುಧಾ, ಮಂಗಳೂರು ಸೆನ್ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರವೀಣ್ ಹಾಗೂ ಪ್ರಮೀಳಾ, ಜಿಲ್ಲಾ ಮಿಷನ್ ಶಕ್ತಿ ಯೋಜನೆಯ ಸಂಯೋಜಕಿ ಅನುಷ್ಯ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಬಂಟ್ವಾಳ ಗ್ರಾಮಾಂತರ, ವಿಟ್ಲ ಮತ್ತು ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ವಿನಯ, ಪೂಜಾ, ರಮ್ಯಾ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷರಾದ ಜಯಂತಿ, ಸುಗ್ರಾಮ ಸಂಯೋಜಕರಾದ ಚೇತನ್, ಕಾವೇರಿ, ಪುತ್ತೂರು ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ನಿಶಾಪ್ರಿಯಾ, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ, ಬಂಟ್ವಾಳ ಹಾಗೂ ಉಳ್ಳಾಲ ತಾಲೂಕಿನ ಗ್ರಾಮಗಳ ಸಂಜೀವಿನಿ ಒಕ್ಕೂಟಗಳ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಬಂಟ್ವಾಳ ಪುರಸಭಾ ನಲ್ಮ್ ಸಿಆರ್ ಪಿ , ಬಂಟ್ವಾಳ ಸಾಂತ್ವನ ಬಳಗದ ಲಕ್ಷ್ಮೀ, ಸುಂದರಿ ಕನ್ಯಾನ ಹಾಗೂ ಶಶಿಕಲಾ ಉಪಸ್ಥಿತರಿದ್ದರು.
ಸಮಾಜ ಕಾರ್ಯ ವಿಭಾಗದ ಮಂಗಳೂರು ವಿಶ್ವ ವಿದ್ಯಾನಿಲಯ, ರೋಶನಿ ನಿಲಯ, ವಿಟ್ಲ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ವಿದ್ಯಾ ಸ್ವಾಗತಿಸಿದರು. ಸಮಾಜ ಕಾರ್ಯಕರ್ತರಾದ ದಾಕ್ಷಾಯಿಣಿ ನಿರೂಪಿಸಿ, ಪ್ರಶಾಂತ್ ವಂದಿಸಿದರು. ಹಾಗೂ ರಶ್ಮಿ ಸಹಕರಿಸಿದರು. ಇದೇ ಸಂದರ್ಭ ವಾಮದಪದವು ಕಾಲೇಜಿನ ಪದವಿ ವಿದ್ಯಾರ್ಥಿಗಳು ಜಾಗೃತಿ ಕಿರುನಾಟಕವನ್ನು ಪ್ರಸ್ತುತ ಪಡಿಸಿದರು.