ಸಾರಾಂಶ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸಲಾಗುವುದು. ಶೀಘ್ರ ಅದರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ ಹೇಳಿದರು.
ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೀತಿಯ ವಿಷಯಕ್ಕೆ ನೇಹಾ ಹಿರೇಮಠ, ಅಂಜಲಿ ಅಂಬಿಗೇರ, ಸ್ವಾತಿ ಅವರ ಕೊಲೆಗಳಾದವು. ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈವರೆಗೂ ಅದು ಈಡೇರಿಲ್ಲ ಎಂದು ದೂರಿದರು.ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರ ಸುರಕ್ಷತೆ, ಭದ್ರತೆ ಕುರಿತು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯೆಯರ ಜತೆ ಈಗಾಗಲೇ ಸಭೆ ನಡೆಸಿ, ಹೋರಾಟದ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಷಯದಲ್ಲಿ ರಾಜಕೀಯೇತರ ಸಂಘಟನೆಗಳಿಂದಲೂ ಹೋರಾಟ ನಡೆಯಬೇಕು ಎಂದರು.
ಅತ್ಯಾಚಾರ ಪ್ರಕರಣಗಳು ನಡೆದರೆ ದೊಡ್ಡ ನಗರಗಳಲ್ಲಿ ಇದು ಸಾಮಾನ್ಯ ಎಂದು ಗೃಹ ಸಚಿವರು ಹೇಳುತ್ತಾರೆ. ಹಾಗಾದರೆ ಮಹಿಳಾ ಸುರಕ್ಷತೆಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.ಮಹಿಳೆಯರ ಮೇಲೆ ದೌರ್ಜನ್ಯಗಳಾದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಾರ ಮನೆಗಳಿಗೂ ಭೇಟಿ ನೀಡಿ ಸಾಂತ್ವನ ಹೇಳುವುದಿಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಮಹಿಳಾ ಆಯೋಗ, ನೇಹಾ ಹಿರೇಮಠ ಹತ್ಯೆಯಾದಾಗ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದರು.
ಶಕ್ತಿ ಯೋಜನೆಯನ್ನು ಅವೈಜ್ಞಾನಿಕವಾಗಿ ರೂಪಿಸಲಾಗಿದೆ. ಈ ಯೋಜನೆಯಿಂದ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಅನುಕೂಲಕ್ಕಿಂತ ಅನಾನೂಕೂಲ ಹೆಚ್ಚಾಗುತ್ತಿದೆ. ಯೋಜನೆಯನ್ನು ಸರ್ಕಾರ ಪರಿಷ್ಕರಿಸಬೇಕು. ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಹೆಚ್ಚು ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಉದ್ಯಾನಗಳಲ್ಲಿ ಅನೈತಿಕ ಚಟುವಟಕೆಗಳು ನಡೆಯುತ್ತಿವೆ. ಅಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬುದು ವಿದ್ಯಾರ್ಥಿನಿಯರ ಒತ್ತಾಯವಾಗಿದೆ. ಆದರೆ, ಗ್ಯಾರಂಟಿ ಯೋಜನೆಗಳಿಂದಾಗಿ ಈ ರೀತಿ ಕ್ಯಾಮೆರಾ ಅಳವಡಿಸಲು ಸರ್ಕಾರದ ಬಳಿ ಹಣ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಷಯಗಳ ಬಗ್ಗೆ ಮಾತನಾಡುವುದು ಕಡಿಮೆ ಮಾಡಿ, ಜಿಲ್ಲೆಯ ಕೆಲಸಗಳ ಬಗ್ಗೆ ಗಮನ ಹರಿಸಬೇಕು ಎಂದರು.