ಮಹಿಳಾ ಕ್ರೀಡಾ ಚಟುವಟಿಕೆ ಒಂದು ದಿನಕ್ಕೆ ಸೀಮಿತವಾಗದಿರಲಿ: ಜಿಲ್ಲಾಧಿಕಾರಿ ಕೆ.ಎಂ. ಜಾನಕಿ

| Published : Mar 12 2025, 12:48 AM IST

ಮಹಿಳಾ ಕ್ರೀಡಾ ಚಟುವಟಿಕೆ ಒಂದು ದಿನಕ್ಕೆ ಸೀಮಿತವಾಗದಿರಲಿ: ಜಿಲ್ಲಾಧಿಕಾರಿ ಕೆ.ಎಂ. ಜಾನಕಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರಲ್ಲಿರುವ ಕ್ರೀಡಾ ಮನೋಭಾವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ತಮ್ಮ ದಿನನಿತ್ಯ ಬದುಕಿನ ಭಾಗವಾಗಿ ಜೀವನದ ಕೊನೆಯವರೆಗೂ ಇರಲಿ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರಲ್ಲಿರುವ ಕ್ರೀಡಾ ಮನೋಭಾವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ತಮ್ಮ ದಿನನಿತ್ಯ ಬದುಕಿನ ಭಾಗವಾಗಿ ಜೀವನದ ಕೊನೆಯವರೆಗೂ ಇರಲಿ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.

ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಲಾಭವಾಗುತ್ತದೆ. ಮಹಿಳೆಯರ ಕೆಲಸಗಳ ಮಧ್ಯೆ ಒತ್ತಡ ಮುಕ್ತ ಜೀವನಕ್ಕೆ ಇದು ಸಹಕಾರಿ. ಎಲ್ಲ ವಯಸ್ಸಿನ ಮಹಿಳೆಯರು ತಮ್ಮ ಆಸಕ್ತದಾಯಕ ಕ್ರೀಡೆಯಲ್ಲಿ ಭಾಗವಹಿಸಿ, ತಮ್ಮ ಪ್ರಯತ್ನಗಳ ಮೂಲಕ ಇತರರಿಗೆ ಪ್ರೇರಣೆಯಾಗಬೇಕು. ಕೆಲವೊಂದು ಸಂದರ್ಭದಲ್ಲಿ ಕ್ರೀಡಾಕೂಟಗಳಿಗೆ ಪ್ರೇಕ್ಷಕರ ಕೊರತೆ ಇದ್ದರೂ, ಯಾವುದೇ ಹಿಂಜರಿಕೆಯಿರದೆ, ಸಂಪೂರ್ಣವಾಗಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಬೇಕು ಎಂದರು.

ಕ್ರೀಡಾ ಪ್ರತಿಜ್ಞಾವಿಧಿಯನ್ನು ಗೊಪ್ಪವ್ವ ಖೋಡಕಿ ಬೋಧಿಸಿದರು. ಕ್ರೀಡಾಕೂಟದಲ್ಲಿ 18 ರಿಂದ 35 ವರ್ಷ ವಯಸ್ಸಿನ ಮತ್ತು ಮುಕ್ತ ವಯಸ್ಸಿನ ಮಹಿಳೆಯರಿಗೆ ಗುಂಪು ಹಾಗೂ ವೈಯಕ್ತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕವಿತಾಳ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಮಹಿಳಾ ಸ್ಪರ್ಧಾಳುಗಳು ಉಪಸ್ಥಿತರಿದ್ದರು.

ಮಹಿಳೆಯರು ದೈಹಿಕ ಚಟುವಟಿಕೆಗಳನ್ನು ಕೇವಲ ಕ್ರೀಡಾಕೂಟಗಳಿಗೆ ಸೀಮಿತಗೊಳಿಸದೆ, ಪ್ರತಿದಿನ ವ್ಯಾಯಾಮ, ನಡಿಗೆ ಮೂಲಕ ಸದೃಢ ಜೀವನ ಶೈಲಿ ರೂಪಿಸಿಕೊಳ್ಳಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಎಲ್ಲಾ ಮಹಿಳೆಯರು ತಮ್ಮ ದೈನಂದಿನ ಕಾರ್ಯಗಳಿಂದ ಸ್ವಲ್ಪ ಸಮಯವನ್ನು ಕ್ರೀಡೆಗೆ ಮೀಸಲಿಟ್ಟರೆ, ಉತ್ತಮ ಸಾಧನೆ ಮಾಡಬಹುದು.

-ಶಶಿಧರ್ ಕುರೇರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ