ಬಸವೇಶ್ವರ ಜಾತ್ರೆಗೆ ಮಹಿಳೆಯರ ರೊಟ್ಟಿ ಸೇವೆ

| Published : Aug 11 2025, 01:56 AM IST / Updated: Aug 11 2025, 01:57 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರೆಯ ದಾಸೋಹಕ್ಕೆ ಪಟ್ಟಣದ ವಿವಿಧ ಏರಿಯಾಗಳ ಮಹಿಳೆಯರು ತಮ್ಮ ಮನೆಯಿಂದ ರೊಟ್ಟಿ ಬುತ್ತಿಗಳನ್ನು ತಂದು ನೀಡುತ್ತಿದ್ದಾರೆ. ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಶನಿವಾರ ಸಂಜೆ ವಿರಕ್ತಮಠದಿಂದ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ಆಗಮಿಸಿದ ಮಹಿಳೆಯರು ಸೇವೆ ಅರ್ಪಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಜಾತ್ರೆಯ ದಾಸೋಹಕ್ಕೆ ಪಟ್ಟಣದ ವಿವಿಧ ಏರಿಯಾಗಳ ಮಹಿಳೆಯರು ತಮ್ಮ ಮನೆಯಿಂದ ರೊಟ್ಟಿ ಬುತ್ತಿಗಳನ್ನು ತಂದು ನೀಡುತ್ತಿದ್ದಾರೆ. ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಶನಿವಾರ ಸಂಜೆ ವಿರಕ್ತಮಠದಿಂದ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ಆಗಮಿಸಿದ ಮಹಿಳೆಯರು ಸೇವೆ ಅರ್ಪಿಸಿದರು.ಸ್ಥಳೀಯ ವಿರಕ್ತಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ರೊಟ್ಟಿಯ ಬುಟ್ಟಿಗಳಿಗೆ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮಹಿಳೆಯರು ರೊಟ್ಟಿಯ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಪ್ರಮುಖ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳಿದರು. ಜಾತ್ರೆಗೆ ರಾಜ್ಯದ ಸುತ್ತಲಿನ ಜಿಲ್ಲೆಗಳ ಭಕ್ತರು ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ನಿರಂತರವಾಗಿ ದಾಸೋಹ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ತಮ್ಮ ಮನೆಯಲ್ಲಿ ರೊಟ್ಟಿಗಳನ್ನು ಮಾಡಿಕೊಂಡು ದಾಸೋಹಕ್ಕೆ ನೀಡುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಿದ್ದು, ಜಾತ್ರೆಯ ಮೆರುಗನ್ನು ಹೆಚ್ಚಿಸಲಿದೆ ಎಂದು ಶ್ರೀಗಳು, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಬಸವೇಶ್ವರ ಸೇವಾ ಸಮಿತಿಯ ಈರಣ್ಣ ಪಟ್ಟಣಶೆಟ್ಟಿ, ಎಂ.ಜಿ.ಆದಿಗೊಂಡ ತಿಳಿಸಿದರು.

ಬಸವೇಶ್ವರ ಜಾತ್ರೋತ್ಸವಕ್ಕೆ ರೊಟ್ಟಿ ಸೇವೆ ನೀಡಿದ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಮುಖಂಡರಾದ ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ಮಹೇಶ ಹಿರೇಕುರಬರ, ಮಹಾಂತೇಶ ಹಂಜಗಿ, ಸಂಗಮೇಶ ಜಾಲಗೇರಿ, ರಮೇಶ ಜಾಲಗೇರಿ, ಬಸವರಾಜ ಏವೂರ, ಗೋಲಪ್ಪ ಜಾಡರ, ಗುರಪ್ಪ ಅವಟಿ, ಲಲಿತಾ ಗಬ್ಬೂರ, ಗೀತಾ ಹಾರಿವಾಳ, ಶಾಂತಾ ಬಸರಕೋಡ ಸೇರಿದಂತೆ ಇತರರು ಭಾಗವಹಿಸಿದ್ದರು.