ಎಲ್ಲ ವಲಯಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕಾನೂನುಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಹಭಾಗಿನಿ ತಂಡ ಒತ್ತಾಯಿಸಿದೆ.

ಕೊಪ್ಪಳ: ಮಹಿಳೆಯರು ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವುದರಿಂದ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಸಮಾನ ಪ್ರಾತಿನಿಧ್ಯ ದೊರೆಯಬೇಕು. ಸಂಸತ್ತು, ವಿಧಾನಸಭೆ ಮತ್ತು ವಿಧಾನಪರಿಷತ್‌ಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾಪವನ್ನು ಶೀಘ್ರ ಜಾರಿಗೊಳಿಸಬೇಕು ಎಂದು ‘ಸಹಭಾಗಿನಿ’ ಪಕ್ಷಾತೀತ ಮಹಿಳಾ ತಂಡ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ನೀಡಿ, ಮಹಿಳೆಯರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ದಸರಾ ಸಂದರ್ಭದಲ್ಲಿ ಅನೌಪಚಾರಿಕವಾಗಿ ಅಸ್ತಿತ್ವಕ್ಕೆ ಬಂದಿರುವ ‘ಸಹಭಾಗಿನಿ’ ತಂಡವು ಕೊಪ್ಪಳದ ಪ್ರಮುಖ ಮಹಿಳೆಯರನ್ನು ಒಳಗೊಂಡಿದೆ. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪಂಚಾಯಿತಿ ವ್ಯವಸ್ಥೆಯಲ್ಲಿ ಈಗಾಗಲೇ ಶೇ. 50ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಇದೇ ಮಾದರಿಯಲ್ಲಿ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್‌ಗಳಲ್ಲಿಯೂ ಶೇ. 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಪ್ರಸ್ತಾಪಕ್ಕೆ ಬೆಂಬಲ ಹೆಚ್ಚಬೇಕು ಎಂದು ತಂಡ ಒತ್ತಾಯಿಸಿದೆ.

ಸಚಿವ ಸಂಪುಟದಲ್ಲೂ ಮಹಿಳೆಯರಿಗೆ ಸ್ಥಾನ ನೀಡಿ: ರಾಜ್ಯ ಸಚಿವ ಸಂಪುಟದಲ್ಲಿಯೂ ಮಹಿಳೆಯರಿಗೆ ಶೇ. 33ರಷ್ಟು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ‘ಸಹಭಾಗಿನಿ’ ತಂಡ ಆಗ್ರಹಿಸಿದೆ. ಮುಖ್ಯಮಂತ್ರಿ ಸೇರಿದಂತೆ 34 ಸದಸ್ಯರಿಗೆ ಅವಕಾಶವಿರುವ ರಾಜ್ಯ ಸಚಿವ ಸಂಪುಟದಲ್ಲಿ ಶೇ. 33ರಷ್ಟು ಪ್ರಾತಿನಿಧ್ಯ ನೀಡಿದರೆ ಕನಿಷ್ಠ 11 ಮಹಿಳೆಯರಿಗೆ ಸಚಿವ ಸ್ಥಾನ ದೊರೆಯಬೇಕು. ಆದರೆ, ಪ್ರಸ್ತುತ ಸಚಿವ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವೆ ಇಲ್ಲದಿರುವುದು ಮಹಿಳಾ ಪ್ರಾತಿನಿಧ್ಯದ ಮಹತ್ವವನ್ನು ಕಡೆಗಣಿಸಿದಂತಾಗಿದೆ ಎಂದು ತಂಡ ಕಳವಳ ವ್ಯಕ್ತಪಡಿಸಿದೆ.

ಎಲ್ಲ ವಲಯಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕಾನೂನುಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ತಂಡ ಒತ್ತಾಯಿಸಿದೆ.

ಈ ಕುರಿತು ಶನಿವಾರ ನಡೆದ ತಂಡದ ಮೊದಲ ಅನೌಪಚಾರಿಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ತಂಡದ ಸದಸ್ಯೆಯರಾದ ಭಾರತಿ ಗುಡ್ಲಾನೂರ, ಗೀತಾ ಮುತ್ತಾಳ, ಹೇಮಲತಾ ನಾಯಕ್, ಕವಿತಾ ಹಿಟ್ನಾಳ, ಲಕ್ಷ್ಮೀ ಚಂದ್ರಶೇಖರ, ಶಾರದಾ ಪಾನಘಂಟಿ, ಪುಷ್ಪಾ ನಿಲೂಗಲ್, ಜಯಮಾಲಾ ಶೇಡ್ಮಿ, ಅಶ್ವಿನಿ ಗದಗಿನಮಠ ಹಾಗೂ ವಿದ್ಯಾ ಹೆಸರೂರು ಉಪಸ್ಥಿತರಿದ್ದರು.