ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಿಕ್ಷಣದ ಶಕ್ತಿ ಮೂಲಕ ಮಹಿಳೆಯರು ಉತ್ತಮ ಸಮಾಜ ಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾಲುದಾರರಾಗಬೇಕು ಎಂದು ಅಂತಾರಾಷ್ಟ್ರೀಯ ರೈತ ಒಕ್ಕೂಟದ ಸಹ ಸಂಚಾಲಕಿ ನಂದಿನಿ ಜಯರಾಂ ಕರೆ ನಿಡಿದರು.ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸ ನೀಡಿ, ಮಹಿಳೆಯರು ಉತ್ತಮ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ತಾವು ಹುಟ್ಟಿದ ಮನೆ ಮತ್ತು ಸೇರಿದ ಮನೆಗಳಿಗೂ ಉತ್ತಮ ಹೆಸರು ತರುವಂತೆ ಕರೆ ನೀಡಿದರು.
ಮಹಿಳಾ ದಿನಾಚರಣೆಯ ಮಹತ್ವ ತಿಳಿಸಿ, ಆಧುನಿಕ ಕಾಲಘಟ್ಟದಲ್ಲೂ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಹೆಣ್ಣಿ ಶೋಷಣೆ ನಿರಂತರವಾಗಿದೆ. ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಭೋಗದ ವಸ್ತುವಾಗಿಯೇ ಯೋಚಿಸುತ್ತಿದೆ ಎಂದು ವಿಷಾದಿಸಿದರು.ತಾರತಮ್ಯ ಸಮಾಜದ ನಡುವೆಯೂ ಹೆಣ್ಣು ತನ್ನ ಸಾಧನೆಗಳ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ. ಬಾಹ್ಯಾಕಾಶ ವಾಸಮಾಡಿ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗಿದ ಸುನೀತಾ ವಿಲಿಯಂ ಇದಕ್ಕೆ ವರ್ತಮಾನದ ಉದಾಹರಣೆ. ಮಹಿಳೆಯರ ಶಿಕ್ಷಣಕ್ಕೆ ಹೋರಾಟ ನಡೆಸಿದ ಭಾರತ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಪುಲೇ, ಸಾಲು ಮರದ ತಿಮ್ಮಕ್ಕನಂತಹ ಸಾಧಕ ಮಹಿಳೆಯರು ನಮ್ಮ ಆದರ್ಶವಾಗಬೇಕು ಎಂದರು.
ಸಮಸಮಾಜ ನಿರ್ಮಾಣದಲ್ಲಿ ಮಹಿಳೆಯರಿಗೆ ನಮ್ಮ ಸರ್ಕಾರಗಳು ಕಾನೂನಿನ ಮೂಲಕ ಎಲ್ಲಾ ಬಗೆಯ ನೆರವು ನೀಡುತ್ತಿವೆ. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲೆಡೆ ಮಹಿಳಾ ಮೀಸಲಾತಿ ತಂದು ಹೆಣ್ಣು ಮಕ್ಕಳ ಆರ್ಥಿಕ ಸಭಲೀಕರಣಕ್ಕೆ ಸರ್ಕಾರಗಳು ಉತ್ತೇಜಿಸುತ್ತಿವೆ ಎಂದರು.ಮಹಿಳೆಯರು ಶಾಸನ ಸಭೆಗಳನ್ನೂ ಪ್ರವೇಶಿಸಿ ದೇಶದ ಕಾನೂನು ರೂಪಿಸುವಲ್ಲಿ ಪಾಲು ಹೊಂದಿದ್ದಾರೆ. ವಿದ್ಯಾರ್ಥಿನಿಯರು ಮತದಾನದ ಬಗ್ಗೆ ಜಾಗೃತಿ ಹೊಂದಬೇಕು. ಮಹಿಳಾ ಅಭಿವ್ಯಕ್ತಿಗೆ ಇಂದು ಕಾನೂನಿನ ಬೆಂಬಲವಿದೆ. ನಮಗೆ ಸಿಕ್ಕಿರುವ ಮಹಿಳಾ ಸ್ವಾತ್ಯಂತ್ರ ದುರುಪಯೋಗವಾಗಬಾರದು ಎಂದರು.
ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್ ದೀಪ ಕಾರ್ಯಕ್ರಮ ಉದ್ಘಾಟಿಸಿದರು. ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಡೆದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲರಾದ ಡಾ. ಕೆ.ಪಿ.ಪ್ರತಿಮಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಎನ್.ಟಿ.ಕೃಷ್ಣಮೂರ್ತಿ, ಮಧು, ವಿನಯ್ ಕುಮಾರ್, ಮಹದೇವ್, ಚೇತನ್, ದಿನೇಶ್ ಮುಂತಾದವರು ಹಾಜರಿದ್ದರು.