ಮಹಿಳೆಯರು ತರಬೇತಿ ಪಡೆದು ಸ್ವ ಉದ್ಯೋಗ ಮಾಡಬೇಕು: ಆಂಜಬೇಕರ್

| Published : Feb 16 2025, 01:45 AM IST

ಸಾರಾಂಶ

ಮಹಿಳೆಯರು ತರಬೇತಿ ಪಡೆದು ನಂತರ ಸ್ವಉದ್ಯೋಗ ಪ್ರಾರಂಭಿಸಿದರೆ ಹೆಚ್ಚು ಯಶಸ್ಸು ಕಾಣಬಹುದು ಎಂದು ನೆದರ್ ಲ್ಯಾಂಡ್ ದೇಶದ ಸೋಲಿಡೇರ್ ಮೆಟ್ ಇಂಡಿಯಾ ನಿರ್ದೇಶಕಿ ಆಂಜಬೇಕರ್ ಸಲಹೆ ನೀಡಿದರು.

ಗುಳದಮನೆಯಲ್ಲಿ ಸೋಷಿಯಲ್ ವೆಲ್‌ಫೇರ್ ಸೊಸೈಟಿಯಿಂದ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನರಸಿಹಂರಾಜಪುರ

ಮಹಿಳೆಯರು ತರಬೇತಿ ಪಡೆದು ನಂತರ ಸ್ವಉದ್ಯೋಗ ಪ್ರಾರಂಭಿಸಿದರೆ ಹೆಚ್ಚು ಯಶಸ್ಸು ಕಾಣಬಹುದು ಎಂದು ನೆದರ್ ಲ್ಯಾಂಡ್ ದೇಶದ ಸೋಲಿಡೇರ್ ಮೆಟ್ ಇಂಡಿಯಾ ನಿರ್ದೇಶಕಿ ಆಂಜಬೇಕರ್ ಸಲಹೆ ನೀಡಿದರು.

ನಗರದಲ್ಲಿ ಗುಳದಮನೆ ಗಣಪತಿ ಪೆಂಡಾಲ್‌ನಲ್ಲಿ ಶನಿವಾರ ಸೋಷಿಯಲ್ ವೆಲ್ ಫೇರ್ ಸೊಸೈಟಿ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸ್ವಸಹಾಯ ಸಂಘಗಳು ಜಂಟಿಯಾಗಿ ಆಯೋಜಿಸಿದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಸಹ ರೈತ ಕುಟುಂಬದಿಂದ ಬಂದಿದ್ದೇನೆ. ಈ ಭಾಗದಲ್ಲಿ ರೈತರು ಮಾಡುತ್ತಿರುವ ಕೃಷಿಯನ್ನು ಅಧ್ಯಯನ ಮಾಡುತ್ತೇನೆ.ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕೃಷಿಯ ಜೊತೆಗೆ ಕೃಷಿಗೆ ಪೂರಕವಾಗಿ ಸ್ವ ಉದ್ಯೋಗ ಮಾಡಬಹುದು. ಮಹಿಳೆಯರು ಟೈಲರಿಂಗ್, ಹಸು ಸಾಕಾಣಿಕೆ ಸೇರಿದಂತೆ ಸ್ವಉದ್ಯೋಗ ಮಾಡಬಹುದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಷಿಯಲ್ ವೆಲ್‌ಪೇರ್ ಸೊಸೈಟಿಯ ನಿರ್ದೇಶಕ ರೆ.ಫಾ.ಜೋಬೀಶ್ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ 35 ವರ್ಷದಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದೇವೆ.ಮಹಿಳೆಯರಿಗೆ ಸ್ವಸಹಾಯ ಸಂಘ ರಚನೆ ಮಾಡಿ ಅವರ ಸ್ವ ಉದ್ಯೋಗಕ್ಕಾಗಿ ಬ್ಯಾಂಕುಗಳಿಂದ ಸಾಲ ಕೊಡಿಸಿದ್ದೇವೆ. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ನಮ್ಮ ಸಂಸ್ಥೆಯ ಮೂಲಕ ಅನೇಕ ತರಬೇತಿ ನೀಡಿದ್ದೇವೆ. ಇಂದು ಸಹ ವಿವಿಧ ಇಲಾಖೆಯವರು ಮಾಹಿತಿ ನೀಡುತ್ತಿದ್ದು ಇದರ ಉಪಯೋಗ ಪಡೆದುಕೊಳ್ಳಿ ಎಂದರು.

ಹಿರಿಯ ತೋಟಗಾರಿಕೆ ನಿರ್ದೇಶಕ ರೋಹಿತ್ ಮಾಹಿತಿ ನೀಡಿ,ರೈತರು ಒಂದೇ ಬೆಳೆಯನ್ನು ನಂಬಿಕೊಂಡಿರಬಾರದು. ಕೃಷಿಯಲ್ಲಿ ಮಿಶ್ರ ಬೆಳೆ ಬೆಳೆದರೆ ಜಾಸ್ತಿ ಲಾಭ ಪಡೆಯಬಹುದು. ಪ್ರತಿಯೊಬ್ಬ ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೈತರು ತಮ್ಮ ಜಮೀನಿನ ಮಣ್ಣನ್ನು ತಂದು ತೋಟಗಾರಿಕೆ ಇಲಾಖೆಗೆ ನೀಡಿದರೆ ಮಣ್ಣು ಪರೀಕ್ಷೆ ಮಾಡಿಸಿಕೊಡುತ್ತೇವೆ ಎಂದರು.

ಸರ್ಕಾರಿ ಆಸ್ಪತ್ರೆಯ ಮಂಜುಳಾ ಆಯುಷ್ಮಾನ್ ಕಾರ್ಡಿನ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿಯ ಎನ್‌ಆರ್‌ಎಲ್‌ಎಲ್‌ಎಂನ ತಾಲೂಕು ಕಾರ್ಯಕ್ರಮ ಸಂಯೋಜಕ ಸುಬ್ರಮಣ್ಯ ಸಂಜೀವಿನಿ ಒಕ್ಕೂಟದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಸಾಂತ್ವನ ಕೇಂದ್ರದ ಆರ್.ಶಶಿಕಲಾ ಮಹಿಳೆಯರಿಗೆ ಇರುವ ಹಕ್ಕಿನ ಬಗ್ಗೆ ಮಾಹಿತಿ ನೀಡಿದರು.ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ಮಹಿಳಾ ಸ್ವಸಹಾಯ ಸಂಘಗಳಾದ ನವ ಜ್ಯೋತಿ, ಸ್ಪೂರ್ತಿ, ನವೋದಯ, ಚಿನ್ಮಯ, ಇಂಚರ, ಸೂರ್ಯ ಸಂಘದ ಸದಸ್ಯರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಪಿಡಿಒ ವಿಂದ್ಯಾ ಹೆಗಡೆ, ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಸಹಾಯಕ ನಿರ್ದೇಶಕ ರೆ.ಫಾ. ಅಭಿನವ್, ಪ್ರಾಜೆಕ್ಟ್ ಕೋ ಆಡಿನೇಟರ್ ರೆ.ಫಾ.ಮ್ಯಾಥ್ಯು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.