ಮಹಿಳೆಯರು ಮುಖ್ಯ ವಾಹಿನಿಗೆ ಬರಲಿ: ಎಂ.ಎಸ್. ಗಾಣಿಗೇರ

| Published : Mar 09 2025, 01:47 AM IST

ಸಾರಾಂಶ

ನದಿಗಳು ಹಾಗೂ ದೇವತೆಗಳಿಗೆ ಬಹುತೇಕ ಮಹಿಳೆಯರ ಹೆಸರಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಮಹಿಳೆಯರ ಬಗ್ಗೆ ಪೂಜ್ಯನೀಯ ಭಾವನೆ ಇದೆ ಎಂದು ಎಂ.ಎಸ್. ಗಾಣಿಗೇರ ಹೇಳಿದರು.

ಧಾರವಾಡ: ವಿಜ್ಞಾನ- ತಂತ್ರಜ್ಞಾನ ಬೆಳೆವಣಿಗೆ ಜೊತೆ ಮುಕ್ತ ಅವಕಾಶ ನೀಡಿದರೂ ಮಹಿಳೆಯರು ಜಾಗೃತವಾಗುತ್ತಿಲ್ಲ ಎಂದು ಪ್ರಾಚಾರ್ಯ ಎಂ.ಎಸ್. ಗಾಣಿಗೇರ ಬೇಸರಿಸಿದರು.

ನಗರದ ಮರಾಠ ವಿದ್ಯಾಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ-ವಾಣಿಜ್ಯ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನದಿಗಳು ಹಾಗೂ ದೇವತೆಗಳಿಗೆ ಬಹುತೇಕ ಮಹಿಳೆಯರ ಹೆಸರಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಮಹಿಳೆಯರ ಬಗ್ಗೆ ಪೂಜ್ಯನೀಯ ಭಾವನೆ ಇದೆ. ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ಕೊಡಬೇಕು ಎಂದರು.

ಓರ್ವ ಮಹಿಳೆ, ತಾಯಿ, ತಂಗಿ, ಮಡದಿಯಾಗಿ ನೀಡುವ ಮಮತೆ, ಪ್ರೀತಿ, ವಾತ್ಸಲ್ಯ ಅನನ್ಯ. ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶೇ. 50ರಷ್ಟು ರಾಜಕೀಯ ಮೀಸಲಾತಿ ಇದೆ. ಹೀಗಾಗಿ, ಶಿಕ್ಷಣ ಕಲಿಯಬೇಕು ಎಂದರು.

ಉಪನ್ಯಾಸಕಿ ಕೀರ್ತಿ ಸಾಳುಂಕೆ ಮಾತನಾಡಿ, ಹೆಣ್ಣು ಜಗದ ಕಣ್ಣು ಎಂದು ಬದಲಾಗಿದೆ. ಬದುಕಿನಲ್ಲಿ ಬರುವ ಕಷ್ಟಗಳು, ಸವಾಲು ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಳ್ಳಲು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಉಪನ್ಯಾಸಕಿ ಸವಿತಾ ಬೆಂತೂರು, ಸ್ತ್ರೀಯರಿಗೆ ಛಲ, ಶಿಕ್ಷಣ ಹಾಗೂ ಆರೋಗ್ಯ ಈ ಮೂರು ಅಮೂಲ್ಯ. ಇವುಗಳನ್ನು ಕಾಪಾಡಿಕೊಂಡಾಗ ಏನಾದರೂ ಸಾಧನೆ ಮಾಡಬಹುದು ಎಂದು ತಿಳಿಸಿದರು.

ಶೋಭಾ ಕೋರಿಶೆಟ್ಟರ, ಪದ್ಮಾ ಭಜಂತ್ರಿ, ಆಶಾರಾಣಿ, ಶಾರದಾ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿ ಮಂಜುಳಾ ಬಸಿಡೋಣಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಪ್ರತಿಮಾ ಸವದತ್ತಿ ಸ್ವಾಗತಿಸಿದರು. ಸಕ್ಕುಬಾಯಿ ಯರಗಟ್ಟಿ ನಿರೂಪಿಸಿದರು. ಲಕ್ಷ್ಮೀ ಗದಿಗೆಪ್ಪಗೌಡರ ವಂದಿಸಿದರು.