ಕನ್ನಡಪ್ರಭ ವಾರ್ತೆ ತುಮಕೂರುಜೆಡಿಎಸ್‌ನ ಮಹಿಳಾ ಕಾರ್ಯಕರ್ತೆಯರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಕ್ಷ ಸಂಘಟನೆಗೆ ಕೆಲಸ ಮಾಡಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿ ನಾಯಕತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್. ನಿಂಗಪ್ಪ ಹೇಳಿದರು.ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿ ಮಾತನಾಡಿದರು. ಹೆಣ್ಣುಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸಿ ತಮ್ಮ ಸಂಘಟನಾಶಕ್ತಿ ಪ್ರದರ್ಶಿಸಬೇಕು. ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವುದರಿಂದ ಸಾಮಾಜಿಕವಾಗಿಯೂ ಗುರುತಿಸಿಕೊಳ್ಳಲು ಅವಕಾಶವಿದೆ ಎಂದರು.ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. ೫೦ರಷ್ಟು ಸ್ಥಾನ ಮೀಸಲಾತಿ ಇದೆ. ಅವಕಾಶ ದೊರೆಯುವ ಅರ್ಹ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಪಡೆದು ರಾಜಕೀಯ ಸ್ಥಾನ ಪಡೆಯಬೇಕು. ಅಂತಹ ಅರ್ಹತೆ ಪಡೆಯಲು ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬೇಕು. ಈ ಮೂಲಕ ಪಕ್ಷವನ್ನೂ ಬೆಳೆಸಿ ತಾವೂ ಬೆಳೆಯಲು ಅವಕಾಶವಿದೆ. ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆ ನಮ್ಮೆಲ್ಲರ ಗುರಿಯಾಗಬೇಕು, ಆ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನ ದೊರಕಿಸಲು ಎಲ್ಲರೂ ಕೆಲಸ ಮಾಡಿ, ಮತ್ತೊಮ್ಮೆ ಹೆಚ್.ಡಿ. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಗುರಿ ನಮ್ಮದಾಗಬೇಕು ಎಂದು ನಿಂಗಪ್ಪ ಹೇಳಿದರು.ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ರಾಜ್‌ಗೌಡ ಹಾಗೂ ನಗರ ಅಧ್ಯಕ್ಷೆ ಲಕ್ಷ್ಮೀ ನಾಯಕ್ ಅವರು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು. ನಂತರ ಮಾತನಾಡಿದ ರೇಖಾ ರಾಜ್‌ಗೌಡ, ಮಹಿಳೆಯರು ರಾಜಕೀಯವಾಗಿ ಬೆಳೆಯಲು ಜೆಡಿಎಸ್ ಒಂದು ಉತ್ತಮ ಪಕ್ಷವಾಗಿದೆ. ಪದಾಧಿಕಾರಿ ಹುದ್ದೆ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂದು ತಿಳಿದು ಪಕ್ಷ ಕಟ್ಟುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಪದಾಧಿಕಾರಿ ಅಲ್ಲದವರೂ ಮುಂದೆ ಅವಕಾಶಗಳನ್ನು ಪಡೆಯಲು ಪಕ್ಷದ ಕಾರ್ಯಚಟುಕಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.ನಗರ ಜೆಡಿಎಸ್ ಅಧ್ಯಕ್ಷ ಟಿ.ಎಚ್. ಜಯರಾಮ್ ಮಾತನಾಡಿ, ನಗರಪಾಲಿಕೆ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಚುನಾವಣೆ ಗೆಲ್ಲಲು ಈಗಿನಿಂದಲೇ ಸಜ್ಜಾಗಬೇಕು. ಪಾಲಿಕೆ ಚುನಾವಣೆಯಲ್ಲೂ ಮಹಿಳೆಯರಿಗೆ ಶೇ. ೫೦ರಷ್ಟು ಸ್ಥಾನ ಮೀಸಲು ಇರುವುದರಿಂದ ಆ ಅವಕಾಶ ಪಡೆಯಲು ಪಕ್ಷದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಮಾಡಬೇಕು ಎಂದು ಹೇಳಿದರು. ನಗರ ಯುವ ಘಟಕ ಅಧ್ಯಕ್ಷ ಪ್ರಮೋದ್‌ಗೌಡ ಅವರು ನಗರ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಹಾಗೂ ಉಪಾಧ್ಯಕ್ಷ ಚಾಯ್ ಸೂರಿ ಅವರನ್ನು ನೇಮಕ ಮಾಡಿದರು. ಜಿಲ್ಲಾಧ್ಯಕ್ಷ ಎಚ್. ನಿಂಗಪ್ಪ ನೇಮಕಾತಿ ಪತ್ರ ನೀಡಿದರು. ಮಹಿಳಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕುಸುಮಾ ಜಗನ್ನಾಥ್, ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ನಗರ ಮಹಿಳಾ ಘಟಕ ಉಪಾಧ್ಯಕ್ಷರಾಗಿ ದೀನಾಮಣಿ, ನೀಲಮ್ಮ, ಮೌನಿನಾ ಬಾನು, ಮಂಜುಳಾ ರಾವ್, ಮಹಾ ಪ್ರಧಾನ ಕಾರ್ಯದರ್ಶಿ ಸುವರ್ಣ, ಪ್ರಧಾನ ಕಾರ್ಯದರ್ಶಿ ರೇಖಾ, ಲಕ್ಷ್ಮೀದೇವಿ, ಆಶಾಜಾನ್, ಕಾರ್ಯದರ್ಶಿ ಮಂಜುಳಾ, ಸಹ ಕಾರ್ಯದರ್ಶಿಗಳಾದ ಯಶೋಧ, ಮಮತಾರಾಣಿ, ವಾಣಿ, ಸದಸ್ಯೆ ತ್ರಿವೇಣಿ ಅವರು ಅಧಿಕಾರ ಸ್ವೀಕರಿಸಿದರು.ನಗರ ಕಾರ್ಯದರ್ಶಿ ಟಿ.ಎಸ್. ಮೋಹನ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಟಿ.ಜಿ. ನರಸಿಂಹರಾಜು, ನಗರ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಸಿ. ಪ್ರಭಾಕರ್, ಮುಖಂಡರಾದ ಗಂಗಣ್ಣ, ರಾಹೇರಾ ಕುಲ್ಸಂ, ರಾಧಾಗೌಡ, ಲಕ್ಷ್ಮಮ್ಮ ವೀರಣ್ಣಗೌಡ ಮೊದಲಾದವರು ಭಾಗವಹಿಸಿದ್ದರು.