ಸಾರಾಂಶ
ಹಾವೇರಿ: ಮಹಿಳೆಯರ ಸುರಕ್ಷತೆಗಾಗಿ ದೇಶದಲ್ಲಿ ಇಂದು ಕಠಿಣ ಕಾನೂನು ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಮಹಿಳೆಯರು ತಮ್ಮ ಕಷ್ಟಗಳ ಕುರಿತು ಚಿಂತಿಸದೆ ಅದೆಲ್ಲವನ್ನು ಮೆಟ್ಟಿನಿಂತು ಹೊಸ ಜೀವನದತ್ತ ಧೈರ್ಯವಾಗಿ ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ಸ್ಥಳೀಯ ಶಿವಾಜಿ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಐಡಿಎಆರ್‌ವೈ ಸಂಸ್ಥೆಯು ಶೋಷಿತ ಮಹಿಳೆಯರಿಗಾಗಿ ಮತ್ತು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ತೆರೆದಿರುವ ಶಕ್ತಿ ಸದನದ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.ಮಹಿಳೆಯರು ಯಾರ ಬೆಂಬಲವಿಲ್ಲದೆ ತನ್ನ ಬದುಕನ್ನು ತಾನೇ ಕಟ್ಟಿಕೊಂಡು ಜೀವನ ನಿರ್ವಹಣೆ ಮಾಡಬೇಕು. ಅದಕ್ಕಾಗಿ ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳ ಪ್ರಯೋಜನೆಗಳನ್ನು ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನು ನಿರಂತರ ಕಾರ್ಯ ಚಟುವಟಿಕೆಯಲ್ಲಿರುತ್ತವೆ. ಮಹಿಳಾ ಶಕ್ತಿ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ. ಈ ಶಕ್ತಿ ಕೇಂದ್ರಗಳು ಮಹಿಳೆಯರ ಬದುಕಿಗೆ ಹೊಸ ರೂಪ ನೀಡಿವೆ ಮತ್ತು ಇವುಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮಹಿಳೆಯರ ಜವಾಬ್ದಾರಿಯಾಗಿದೆ ಎಂದರು.ಶಕ್ತಿ ಸದನದ ನಿರ್ವಾಹಕಿ ಪರಿಮಳಾ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶೋಷಿತ ಮಹಿಳೆಯರಿಗೆ ಈ ಶಕ್ತಿ ಕೇಂದ್ರದಲ್ಲಿ ಸಕಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಇದರ ಜೊತೆಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಮುಂದಿನ ದಿನಮಾನಗಳಲ್ಲಿ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರಾದ ಬಿ.ಆರ್. ಮುತಾಲಿಕ ದೇಸಾಯಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್. ವೈ. ಶಿರಕೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ ಆಲದರ್ತಿ, ಸಾಹಿತಿ ಸತೀಶ ಕುಲಕರ್ಣಿ ಇತರರು ಇದ್ದರು.