ಮಹಿಳೆಯರು ಸಂಜೀವಿನಿ ಭವನ ಸದ್ಬಳಕೆ ಮಾಡಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು

| Published : May 02 2025, 12:16 AM IST

ಮಹಿಳೆಯರು ಸಂಜೀವಿನಿ ಭವನ ಸದ್ಬಳಕೆ ಮಾಡಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶದಿಂದ ಭವನ ನಿರ್ಮಾಣ ಮಾಡಲಾಗಿದೆ. ಒಂದು ಪಂಚಾಯ್ತಿಯಲ್ಲಿ ಕನಿಷ್ಠ 5 ರಿಂದ 10 ಸ್ತ್ರೀ ಶಕ್ತಿ ಗುಂಪುಗಳನ್ನು ಸ್ಥಾಪಿಸಿ ಅವರಿಗೆ ತರಬೇತಿದಾರರು ಉತ್ತಮ ರೀತಿಯಲ್ಲಿ ಮೇಣದಬತ್ತಿ, ಪೆನಾಯಲ್, ಗಂಧದ ಕಡ್ಡಿ, ಆಹಾರ ಪದಾರ್ಥಗಳು ಸೇರಿದಂತೆ ಇನ್ನೂ ಅನೇಕ ತರಬೇತಿ ನೀಡುವ ಮೂಲಕ ಸ್ವ-ಉದ್ಯೋಗತ್ತ ಮುಖ ಮಾಡುವಂತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಂಜೀವಿನಿ ಮಹಿಳಾ ಭವನವನ್ನು ಮಹಿಳೆಯರ ಸಬಲೀಕರಣದ ಉದ್ದೇಶದಿಂದ ನಿರ್ಮಿಸಲಾಗಿದೆ. ಮಹಿಳೆಯರು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ ಗ್ರಾಪಂನಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಸಂಜೀವಿನಿ ಮಹಿಳಾ ಭವನ (ಎನ್.ಆರ್.ಎಲ್.ಎಂ) ಉದ್ಘಾಟಿಸಿ ಮಾತನಾಡಿ, ಸರ್ಕಾರದ ಈ ಉತ್ತಮ ಕಾರ್ಯಕ್ರಮವನ್ನು ಪಿಡಿಒಗಳು ಮತ್ತು ಆಡಳಿತ ಮಂಡಳಿ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಶಾಸಕರಾದ ನಮಗೆ ಹೊರೆ ಕಡಿಮೆಯಾಗುತ್ತದೆ ಎಂದರು.

ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶದಿಂದ ಭವನ ನಿರ್ಮಾಣ ಮಾಡಲಾಗಿದೆ. ಒಂದು ಪಂಚಾಯ್ತಿಯಲ್ಲಿ ಕನಿಷ್ಠ 5 ರಿಂದ 10 ಸ್ತ್ರೀ ಶಕ್ತಿ ಗುಂಪುಗಳನ್ನು ಸ್ಥಾಪಿಸಿ ಅವರಿಗೆ ತರಬೇತಿದಾರರು ಉತ್ತಮ ರೀತಿಯಲ್ಲಿ ಮೇಣದಬತ್ತಿ, ಪೆನಾಯಲ್, ಗಂಧದ ಕಡ್ಡಿ, ಆಹಾರ ಪದಾರ್ಥಗಳು ಸೇರಿದಂತೆ ಇನ್ನೂ ಅನೇಕ ತರಬೇತಿ ನೀಡುವ ಮೂಲಕ ಸ್ವ-ಉದ್ಯೋಗತ್ತ ಮುಖ ಮಾಡುವಂತೆ ಮಾಡಬೇಕು ಎಂದರು.

ಪ್ರತಿ ಪಂಚಾಯ್ತಿಯಲ್ಲೂ ಸರ್ಕಾರಿ ಜಾಗವನ್ನು ಹುಡುಕಿ ನಾಲ್ಕೈದು ಎಕರೆ ಭೂಮಿಯನ್ನು ಕಾಯ್ದಿರಿಸಿಕೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಿದ ಶಾಸಕರು, ಪಂಚಾಯ್ತಿ ಮಟ್ಟದಲ್ಲಿ ಕೆಡಿಪಿ ಸಭೆ ಮಾಡಿದರೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗುತ್ತಾರೆ. ಇದರಿಂದ ಪಂಚಾಯ್ತಿ ಮಟ್ಟದಲ್ಲೇ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆ, ಸ್ವಚ್ಛತೆಗಾಗಿಯೇ ಪಂಚಾಯ್ತಿಗಳಿಗೆ ಒಂದು ವಾಹನ ನೀಡಲಾಗಿದೆ. ಹಸಿಕಸ ಹಾಗೂ ಒಣಕಸ ಹಾಕಲು ಪ್ರತಿಯೊಂದು ಮನೆಗೆ ಎರಡು ಬಕೇಟ್‌ಗಳನ್ನು ಸಹ ನೀಡಲಾಗಿದೆ. ಆದರೆ, ಈ ಯೋಜನೆ ಸರಿಯಾಗಿ ಉಪಯೋಗ ಅಗುತ್ತಿಲ್ಲ ಎಂದರು.

ಇದೇ ವೇಳೆ ಅಪಘಾತದಲ್ಲಿ ನಿಧನರಾಗಿದ್ದ ಬಳ್ಳೇಕೆರೆ ಗ್ರಾಮದ ನೀರುಘಂಟಿ ಗಿರಿಜಾ ಅವರ ಮಕ್ಕಳಿಗೆ ಪಿಡಿಒ ಮತ್ತು ಸಿಬ್ಬಂದಿಯಿಂದ ಸಂಗ್ರಹಿಸಿದ್ದ ಧನಸಹಾಯದ ಬಾಂಡ್‌ಗಳನ್ನು ಶಾಸಕರು ವಿತರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ಎಚ್.ಟಿ.ಮಂಜು ಅವರನ್ನು ಕಲ್ಯಾಣಿಯಲ್ಲಿ ಪೂಜೆ ಸಲ್ಲಿಸಿ ಮಹಿಳೆಯರು ಕಳಸ ಹೊತ್ತು ಮೆರವಣಿಗೆಯ ಮೂಲಕ ಸಮಾರಂಭದ ವೇದಿಕೆಗೆ ಕರೆತಂದರು.

ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಸವಿತ ಗೋವಿಂದಶೆಟ್ಟಿ, ಉಪಾಧ್ಯಕ್ಷೆ ನಾಗರತ್ನ ಗಂಗಾಧರ್, ತಾಪಂ ಸಹಾಯಕ ನಿರ್ದೇಶಕ ಟಿ.ನರಸಿಂಹರಾಜು, ಜೆಡಿಎಸ್ ಯುವ ಮುಖಂಡ, ಗ್ರಾಪಂ ಸದಸ್ಯ ಎ.ಎನ್.ಶಿವಲಿಂಗ (ಗುಂಡ), ಸದಸ್ಯರಾದ ಸ್ವಾಮಿಗೌಡ, ರವಿಕುಮಾರ್, ರಂಗರಾಜು, ರಾಜು, ಹೇಮಕುಮಾರ್, ಸವಿತ ಇಂದ್ರೇಶ್, ಪಿಡಿಒ ಕೆ.ಎಸ್.ಕುಮಾರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರಿದ್ದರು.