ಮಹಿಳೆಗೆ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗದಿರಲಿ

| Published : Mar 27 2025, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಮಹಿಳೆ-ಪುರುಷರು ಜೋಡೆತ್ತು ಇದ್ದಂತೆ, ಸಮನಾಗಿ ಕಾರ್ಯತತ್ಪರರಾಗಬೇಕು. ಮಹಿಳೆಯರು ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವನ್ನಾಗಿಸಿಕೊಳ್ಳಬಾರದು ಎಂದು ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನಾ ಮನಗೂಳಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಮಹಿಳೆ-ಪುರುಷರು ಜೋಡೆತ್ತು ಇದ್ದಂತೆ, ಸಮನಾಗಿ ಕಾರ್ಯತತ್ಪರರಾಗಬೇಕು. ಮಹಿಳೆಯರು ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವನ್ನಾಗಿಸಿಕೊಳ್ಳಬಾರದು ಎಂದು ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನಾ ಮನಗೂಳಿ ಸಲಹೆ ನೀಡಿದರು.

ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಮಹಿಳಾ ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಕ್ಷೇತ್ರಗಳಲ್ಲೂ, ಪುರುಷರಿಗೆ ಸರಿಸಮಾನರಾಗಿ ಮಹಿಳೆಯರಿದ್ದಾರೆ. ಯಾವುದೇ ಕ್ಷೇತ್ರದ ಸಾಧನೆಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದು, ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳಾ ಸ್ವ ಉದ್ಯೋಗಕ್ಕೆ ಹಣಕಾಸಿಕ ನೆರವು ಒದಗಿಸುತ್ತಿವೆ. ಸ್ಥಳೀಯ ಬ್ಯಾಂಕ್‌ಗಳ ಮೂಲಕ ಅನುಷ್ಠಾನಗೊಳಿಸುತ್ತಿವೆ. ಮಹಿಳೆಯರು ಸ್ವ ಉದ್ಯೋಗದತ್ತಲೂ ಆಸಕ್ತಿ ಹೊಂದಬೇಕು. ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದಾಗಿದ್ದು, ದೇಶದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಬಿಜೆಪಿಯ ಲಲಿತಾ ಭೂಸನೂರ ಮಾತನಾಡಿ, ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಅಗತ್ಯ ಎಂದು ತಿಳಿಸಿದರು.ಮಹಿಳಾ ಜನಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷೆ ಜಗದೇವಿ ಹೆಗಡೆ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಮಹಿಳಾ ಜನಜಾಗೃತಿ ವೇದಿಕೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲೂಕು ಘಟಕದ ಅಧ್ಯಕ್ಷೆ ಜಯಶ್ರೀ ಹದನೂರ ಕ್ರೀಯಾಶೀಲ ಅಧ್ಯಕ್ಷರಾಗಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಗುರುದೇವ ಆಶ್ರಮದ ಶಾಂತ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ವೇದಿಕೆ ಉಪಾಧ್ಯಕ್ಷೆ ಗುರುದೇವಿ ಕಟ್ಟಿಮನಿ, ಕಾಂಗ್ರೆಸ್ ಮುಖಂಡೆ ಮಹಾನಂದ ಬಮ್ಮಣ್ಣಿ, ಬಿಜೆಪಿ ಮುಖಂಡೆ ಅನುಸೂಯ ಪಾರಗೊಂಡ ಹಾಗೂ ಲಕ್ಷ್ಮೀ ಪಾಟೀಲ ಮಾತನಾಡಿದರು. ಆದರ್ಶ ವಿದ್ಯಾಲಯದ ಶಿಕ್ಷಕಿ ಜ್ಯೋತಿ ನಂದಿಮಠ ಉಪನ್ಯಾಸ ನೀಡಿದರು. ಮಹಿಳಾ ಸಾಧಕಿಯರಾದ ಸುನಂದಾ ಯಂಪೂರೆ, ಸಾವಿತ್ರಿ ಕುರಿ, ಸರಸ್ವತಿ ಮಾಶ್ಯಾಳ, ಸಾವಿತ್ರಿ ಅರಳಗುಂಡಗಿ, ಅನ್ನಪೂರ್ಣ ಮೆಟಗಾರ ಅವರನ್ನು ಗೌರವಿಸಲಾಯಿತು. ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ತಾಲೂಕು ಘಟಕದ ಅಧ್ಯಕ್ಷೆ ಜಯಶ್ರೀ ಹದನೂರ ಮುಂತಾದವರು ಇದ್ದರು.